

Virat Kohli: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆಡಿರುವ 11 ಪಂದ್ಯಗಳಲ್ಲಿ 8 ಗೆದ್ದು ಮೂರರಲ್ಲಿ ಸೋಲು ಕಂಡಿದೆ. ಸರಣಿ ಗೆಲುವುಗಳನ್ನು ನೋಡಿರುವ ಆರ್ಸಿಬಿಗೆ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ತಂಡದಲ್ಲಿ ಹಾಗೂ ಅಭಿಮಾನಿಗಳಲ್ಲಿ ಟ್ರೋಫಿ ಗೆಲುವಿನ ಉತ್ಸಾಹವನ್ನು ಮೂಡಿಸಿದೆ.
ಒಂದು ಪಂದ್ಯ ಹೊರತುಪಡಿಸಿ, ಉಳಿದೆಲ್ಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ವಿರಾಟ್, ಪ್ರಸ್ತುತ ಐಪಿಎಲ್ 18ನೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಆಟಗಾರರಾಗಿ ಆರೆಂಜ್ ಕ್ಯಾಪ್ ತೊಟ್ಟು, ಮೈದಾನದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬ್ಯಾಟಿಂಗ್ನಲ್ಲಿ ಸ್ಥಿರತೆ ಕಾಪಾಡಿಕೊಂಡು ಬಂದಿರುವ ಕೊಹ್ಲಿ, ಇತರರಿಗೂ ಮಾದರಿಯಾಗುವಂತೆ ಆಟವನ್ನು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆಯೂ ಟೀಕೆ, ವ್ಯಂಗ್ಯಗಳು ಮಾತ್ರ ಅವರನ್ನು ಬಿಟ್ಟಿಲ್ಲ.
ಅತ್ಯಧಿಕ ರನ್ ಗಳಿಸಿ, ತಂಡವನ್ನು ಪ್ಲೇಆಫ್ನತ್ತ ಕರೆದೊಯ್ಯಲು ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದೇ ಆದರೂ ಮಾಜಿ ಹಿರಿಯ ಆಟಗಾರರು, ದಿಗ್ಗಜರು ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಟೀಕಿಸಿದ್ದಾರೆ. ಸಂಜಯ್ ಮಂಜ್ರೇಕರ್, ವೀರೇಂದ್ರ ಸೆಹ್ವಾಗ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಕೊಹ್ಲಿ ಮಿಡೆಲ್ ಓವರ್ಗಳಲ್ಲಿ ಅಧಿಕ ರನ್ ಗಳಿಸುವ ವೇಗದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಸ್ಟ್ರೈಕ್ ರೇಟ್ ಕುರಿತಾದ ಟೀಕೆಗಳು ಈ ಸೀಸನ್ ಮಾತ್ರವಲ್ಲದೆ, ಕಳೆದ ಎರಡು ಸೀಸನ್ನಿಂದಲೂ ಕೇಳಿಬಂದಿವೆ.
ಇದನ್ನೂ ಓದಿ: ಹೆಚ್ಚುವರಿ ಟೋಲ್ ಶುಲ್ಕ ಕಡಿತಕ್ಕೆ ಹೈಕೋರ್ಟ್ ತಡೆ
ತನ್ನ ಆಪ್ತ ಸ್ನೇಹಿತನ ಬಗ್ಗೆ ಟೀಕಿಸುವ ಮಾಜಿ ಕ್ರಿಕೆಟಿಗರ ಬಾಯಿ ಮುಚ್ಚಿಸಲು ಖುದ್ದು ತಾವೇ ಮುಂದಾದ ಮಾಜಿ ಆರ್ಸಿಬಿ ಬ್ಯಾಟರ್ ಎಬಿ ಡಿವಿಲಿಯರ್ಸ್, "ಆರ್ಸಿಬಿಯಲ್ಲಿ ವಿರಾಟ್ ಸದಾ ಇರುವಂತ ಒಬ್ಬ ಆಟಗಾರ. ತಂಡದಲ್ಲಿ ಅವರಿದ್ದಾರೆ ಎಂದರೆ ಅಲ್ಲಿ ಭಯಕ್ಕೆ ಜಾಗವಿಲ್ಲ. ಆತ ಆರ್ಸಿಬಿಗೆ ಮಿಸ್ಟರ್ ಸೇಫ್ಟಿ. ನಾನು ನೋಡಿದಂತೆ ಯಾವುದು ಬದಲಾಗಿಲ್ಲ. ಇಲ್ಲಿ ಕೆಲವರಿಗೆ ಹೇಳಬೇಕು, ನನಗೆ ಆನೆಯ ಮಿದುಳಿದೆ. ವಿರಾಟ್ ಮಂದಗತಿಯ ಬ್ಯಾಟಿಂಗ್ ಮಾಡ್ತಾರೆ, ಸ್ಟ್ರೈಕ್ ರೇಟ್ ಸ್ಲೋ ಎನ್ನುತ್ತೀರಿ ಅಲ್ವಾ? ಗಮನಿಸಿ ಕಳೆದ ಪಂದ್ಯದಲ್ಲಿ ಅವರು 200 ಸ್ಟ್ರೈಕ್ ರೇಟ್ ಸಮೀಪದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ನಿಮಗೆ ನೆನಪಿರಲಿ, ಈಗ ನೀವು ಹೇಳಿದ್ದನ್ನು ನೀವೇ ತಿನ್ನಿ" ಎಂದು ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).