ಹೆಚ್ಚುವರಿ ಟೋಲ್​ ಶುಲ್ಕ ಕಡಿತಕ್ಕೆ ಹೈಕೋರ್ಟ್​ ತಡೆ

Toll Gate
Published on

ಕರಾವಳಿ ಬಸ್​ ಮಾಲೀಕರ ಸಂಘ ಮಾಹಿತಿ

ತಾತ್ಕಾಲಿಕ ಪರಿಹಾರ ನೀಡಿದ ನ್ಯಾಯಾಲಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಸ್ತಾನ ಮತ್ತು ಹೆಜಮಾಡಿ ಟೋಲ್​ ಗೇಟ್​ಗಳಲ್ಲಿ ಹೆಚ್ಚುವರಿ ಹಣ ಕಡಿತ ಮಾಡಿ ಅನ್ಯಾಯ ಮಾಡುತ್ತಿರುವ ಕುರಿತು ನಡೆಸಿದ್ದ ಹೋರಾಟಕ್ಕೆ ಹೈಕೋರ್ಟ್​ ತಾತ್ಕಾಲಿಕ ಪರಿಹಾರ ನೀಡಿದೆ ಎಂದು ಕರಾವಳಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್​ ತಿಳಿಸಿದ್ದಾರೆ.

7,500ರಿಂದ 12 ಸಾವಿರ ಕೆಜಿ ತೂಕದ ಬಸ್​ಗಳು ಟೋಲ್​ ಗೇಟ್​ಗಳಿಂದ ಫಾಸ್ಟ್ಯಾಗ್​ ಬಳಸಿ ತೆರಳುವಾಗ ಟೋಲ್​ ಶುಲ್ಕವು ಖಾತೆಯಿಂದ ಕಡಿತ ಆಗುತ್ತಿತ್ತು. ಆದರೆ, ನಂತರದ ದಿನಗಳಲ್ಲಿ ಮತ್ತಷ್ಟು ಹೆಚ್ಚುವರಿ ಹಣವನ್ನು ಬಸ್​ ಮಾಲೀಕರ ಖಾತೆಯಿಂದ ಕಡಿತ ಮಾಡಲಾಗುತ್ತಿತ್ತು. ಈ ಅನ್ಯಾಯದ ವಿರುದ್ಧ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ.

ಕೋರ್ಟ್​ ಮೊರೆ

ಟೋಲ್​ಗೇಟ್​ಗಳಿಂದ ಅನಗತ್ಯವಾಗಿ ಲಕ್ಷಾಂತರ ರೂ. ಹಣ ಕಳೆದುಕೊಳ್ಳುವ ಸ್ಥಿತಿ ಬಂದಿದ್ದರಿಂದ ಸಂಘವು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರೂ ಸ್ಪಷ್ಟ ಪರಿಹಾರ ಲಭಿಸಿರಲಿಲ್ಲ. ಹೀಗಾಗಿ ಸಂಘವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಿಸಿ, ನ್ಯಾಯ ನೀಡುವಂತೆ ವಿನಂತಿಸಿತ್ತು.

ನ್ಯಾಯಾಲಯದಿಂದ ವಿಚಾರಣೆ

2025ರ ಏ.25ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು 'ವಾಹನಗಳು ಟೋಲ್​ ಗೇಟ್​ ಪಾಸಾದ ತತ್​ಕ್ಷಣದಲ್ಲಿಯೇ ಫಾಸ್ಟ್ಯಾಗ್​ ಮುಖಾಂತರ ಟೋಲ್​ ಶುಲ್ಕ ಕಡಿತ ಆಗಬೇಕು. ಬಳಿಕ ಅಕ್ರಮವಾಗಿ ಹೆಚ್ಚುವರಿ ಹಣ ಕಡಿತಗೊಳಿಸಲು ಅವಕಾಶವಿಲ್ಲ' ಎಂದು ತಾತ್ಕಾಲಿಕ ಆದೇಶ ನೀಡಿದೆ. ಈ ತಾತ್ಕಾಲಿಕ ಪರಿಹಾರದಿಂದ ಕರಾವಳಿಯ ಸಾರಿಗೆ ಉದ್ಯಮಿಗಳು ಟೋಲ್​ ಗೇಟ್​ನವರ ಅವ್ಯವಸ್ಥೆಯಿಂದ ನಿರಂತರ ವಂಚನೆಗೆ ಒಳಗಾಗುವುದು ತಪ್ಪಿದಂತಾಗಿದೆ ಎಂದು ರಾಘವೇಂದ್ರ ಭಟ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net