

AB de Villiers: ಮಾ.28 ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ರೋಚಕತೆಗೆ ತಿರುಗಲಿದೆ ಎಂದೇ ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ, 50 ರನ್ಗಳಿಂದ ಸಿಎಸ್ಕೆಯನ್ನು ತವರಿನಲ್ಲೇ ಮಣಿಸಿದ ಆರ್ಸಿಬಿ ಗೆಲುವನ್ನು ಕಂಡು ಅಚ್ಚರಿ ಜತೆಗೆ ಭಾರೀ ಬೇಸರ ಉಂಟಾಯಿತು. ಇದಕ್ಕೆ ಕಾರಣ, ಚೆಪಾಕ್ನಲ್ಲಿ ಸೇರಿದ್ದ ಅಭಿಮಾನಿಗಳು. ಸಿಎಸ್ಕೆ ಗೆಲುವಿಗಾಗಿ ಕಾದು ಕುಳಿತ್ತಿದ್ದವರ ಅಪಾರ ನಿರೀಕ್ಷೆಗಳು ಹುಸಿಯಾಗಿದ್ದೇ ಬೇಸರಕ್ಕೆ ಕಾರಣವಾಯಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ, 197 ರನ್ಗಳ ಗುರಿಯನ್ನು ಬೆನ್ನಟ್ಟುವಂತೆ ಸಿಎಸ್ಕೆಗೆ ಸವಾಲು ಹಾಕಿತು. ಇದನ್ನು ಸಾಧಿಸುವಲ್ಲಿ ಮುಗ್ಗರಿಸಿದ ಚೆನ್ನೈ ಪಡೆ, ಆರಂಭಿಕ ಹಂತದಲ್ಲೇ ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪುವಲ್ಲಿ ಎಡವಿತು. ಅಂತಿಮವಾಗಿ ತವರಿನಲ್ಲೇ ಎರಡನೇ ಪಂದ್ಯ ಸೋತ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟಾಯಿತು ಎಂಬುದರಲ್ಲಿ ಕಿಂಚಿತ್ತು ಅನುಮಾನವೇ ಇಲ್ಲ. ಧೋನಿ ಸೇರಿದಂತೆ ಸಿಎಸ್ಕೆ ತಂಡದ ಕೆಲವು ಆಟಗಾರರನ್ನು ಆರ್ಸಿಬಿ ಫ್ಯಾನ್ಸ್ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಟೀಕಿಸಿದ್ದಾರೆ.
ಇನ್ನು ಸಿಎಸ್ಕೆ ವಿರುದ್ಧದ ಭಾರೀ ಅಂತರದ ಗೆಲುವಿನ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್, ಮಾಜಿ ಆರ್ಸಿಬಿ ಆಟಗಾರ, ಎಬಿ ಡಿವಿಲಿಯರ್ಸ್, "ಐಪಿಎಲ್ 18ನೇ ಆವೃತ್ತಿಯ ಶುಭಾರಂಭ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ, ಆಡಿದ ಎರಡನೇ ಪಂದ್ಯದಲ್ಲಿ ತಮ್ಮ ಬದ್ಧ ವೈರಿ ತಂಡ ಸಿಎಸ್ಕೆಯನ್ನು ಅವರ ತವರಿನಲ್ಲೇ ಮಣಿಸಿದ್ದು ಶ್ಲಾಘನೀಯ" ಎಂದಿದ್ದಾರೆ.
“ಆರಂಭದಲ್ಲಿ ನಾನು ಭುವನೇಶ್ವರ್ ಕುಮಾರ್ ಆಡುವುದಿಲ್ಲ ಎಂದೇ ಭಾವಿಸಿದ್ದೆ. ಆದರೆ, ನಂತರದಲ್ಲಿ ಅವರು ತಂಡದ ಪರ ಕಣಕ್ಕಿಳಿದಿದ್ದು ಭಾರೀ ಖುಷಿ ನೀಡಿತು. ಭುವಿ ಮೊದಲ ಪಂದ್ಯ ಕೆಕೆಆರ್ ವಿರುದ್ಧ ಆಡಲಿಲ್ಲ. ಆದರೆ, ಸಿಎಸ್ಕೆ ಎದುರಿನ ಪಂದ್ಯದಲ್ಲಿ ಅವರನ್ನು ಕರೆತಂದಿದ್ದು ನಿಜಕ್ಕೂ ಉತ್ತಮ ನಿರ್ಧಾರ. ಹಾಲಿ ಚಾಂಪಿಯನ್ಗಳಾದ ಕೆಕೆಆರ್ ಮತ್ತು ಸಿಎಸ್ಕೆ ತಂಡಗಳನ್ನು ಸೋಲಿಸಿರುವುದು ಒಂದು ದೊಡ್ಡ ಸಾಧನೆಯೇ. ಅದರಲ್ಲೂ ಸಿಎಸ್ಕೆಯನ್ನು ತವರಿನಲ್ಲಿ ಮಣಿಸಿದ್ದು ಗಮನಾರ್ಹ. ಉತ್ತಮ ರನ್ರೇಟ್ನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಉತ್ತಮ ಆರಂಭ" ಎಂದು ಡಿವಿಲಿಯರ್ಸ್ ಹೇಳಿದ್ದಾರೆ,(ಏಜೆನ್ಸೀಸ್).