

ತಿರುವನಂತಪುರಂ: ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿರುವ ನಟ ಮೋಹನ್ ಲಾಲ್(Mohanlal) ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಎಲ್2: ಎಂಪುರಾನ್ ಬಿಡುಗಡೆಯಾದ ಬಳಿಕ ಅನಿರೀಕ್ಷಿತವಾಗಿ ವಿವಾದಕ್ಕೆ ಸಿಲುಕಿದೆ. ಈ ತಿಂಗಳ 27ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿನ ಕೆಲವು ದೃಶ್ಯಗಳು ನಿರ್ದಿಷ್ಟ ಗುಂಪಿನ ಜನರಿಗೆ ಆಕ್ಷೇಪಾರ್ಹವಾಗಿವೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಮೋಹನ್ ಲಾಲ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಕ್ಷಮೆಯಾಚಿಸುವ ಪತ್ರವನ್ನು ಹಂಚಿಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸುವ ಪತ್ರವನ್ನು ಹಂಚಿಕೊಂಡಿರುವ ನಟ ಮೋಹನ್ಲಾಲ್, ಲೂಸಿಫರ್ ಸಿನಿಮಾದ ಮುಂದುವರಿದ ಭಾಗ 'ಎಲ್ 2: ಎಂಪುರಾನ್' ಚಿತ್ರದಲ್ಲಿನ ಕೆಲವು ರಾಜಕೀಯ ಮತ್ತು ಸಾಮಾಜಿಕ ವಿಷಯಗಳು ನನ್ನ ಅನೇಕ ಪ್ರೀತಿಪಾತ್ರರಿಗೆ ತೀವ್ರ ನೋವನ್ನುಂಟುಮಾಡಿವೆ ಎಂದು ನಾನು ತಿಳಿದುಕೊಂಡಿದ್ದೇನೆ. ಒಬ್ಬ ನಟನಾಗಿ ನನ್ನ ಸಿನಿಮಾಗಳಲ್ಲಿ ಯಾವುದೇ ರಾಜಕೀಯ ಚಳುವಳಿ, ಸಿದ್ಧಾಂತ ಅಥವಾ ಧಾರ್ಮಿಕ ಗುಂಪಿನ ಬಗ್ಗೆ ದ್ವೇಷ ಮೂಡದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದ್ದರಿಂದ, ಎಂಪುರಾನ್ ತಂಡ ಮತ್ತು ನಾನು, ನನ್ನ ಪ್ರೀತಿಪಾತ್ರರಿಗೆ ಉಂಟಾದ ಭಾವನಾತ್ಮಕ ಯಾತನೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ಈ ಚಿತ್ರದ ಹಿಂದೆ ಕೆಲಸ ಮಾಡಿದ ನಮ್ಮೆಲ್ಲರಿಗೂ ಜವಾಬ್ದಾರಿ ಇದೆ ಎಂದು ನಮಗೆ ಅರಿವಾಯಿತು. ಅದಕ್ಕಾಗಿಯೇ ನಾವು ಒಟ್ಟಾಗಿ ಅಂತಹ ಅಂಶಗಳನ್ನು ಚಿತ್ರದಿಂದ ಖಂಡಿತವಾಗಿಯೂ ತೆಗೆದುಹಾಕಲು ನಿರ್ಧರಿಸಿದೆವು. ಕಳೆದ ನಾಲ್ಕು ದಶಕಗಳಿಂದ ನಾನು ನನ್ನ ಚಲನಚಿತ್ರ ವೃತ್ತಿಜೀವನವನ್ನು ನಿಮ್ಮಲ್ಲಿ ಒಬ್ಬನಾಗಿ ಕಳೆದಿದ್ದೇನೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನನ್ನ ಶಕ್ತಿ ಎಂದು ಮೋಹನ್ ಲಾಲ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಈ ವಿವಾದದ ನಂತರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರ ತಂಡಕ್ಕೆ 17 ಬದಲಾವಣೆಗಳನ್ನು ಮಾಡಲು ಆದೇಶಿಸಿತು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ನಂತರ ಸಿಬಿಎಫ್‌ಸಿ ಆದೇಶಗಳನ್ನು ಹೊರಡಿಸಿತು. ಏತನ್ಮಧ್ಯೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರವು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದು ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್, ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಮಂಜು ವಾರಿಯರ್, ಜೆರೋಮ್ ಫ್ಲಿನ್ ಮತ್ತು ಎರಿಕ್ ಎಬೋನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)