Asia Cup 2025 | ಸೂರ್ಯಕುಮಾರ್​​ ಯಾದವ್​ ನಿಮಗೆ ಧೈರ್ಯವಿದ್ದರೆ...ಹೀಗೆ ಮಾಡಿ; ಟೀಮ್​​​ ಇಂಡಿಯಾ ನಾಯಕನಿಗೆ ಸವಾಲ್​ ಹಾಕಿದ ಆಪ್​ ನಾಯಕ ಸೌರಭ್ ಭಾರದ್ವಾಜ್

Saurabh Bhardwaj Suryakumar Yadav
Published on

Asia Cup 2025: ಭಾನುವಾರ ಪಾಕಿಸ್ತಾನ ವಿರುದ್ಧ ಪಂದ್ಯ ಆಡಿದ್ದಕ್ಕಾಗಿ ಬಿಸಿಸಿಐ ಮತ್ತು ತಂಡದ ನಾಯಕ ಸೂರ್ಯಕುಮಾರ್ ಯಾದವ್​​ರನ್ನು ದೆಹಲಿಯ ಮಾಜಿ ಸಚಿವ ಸೌರಭ್ ಭಾರದ್ವಾಜ್ ತರಾಟೆಗೆ ತೆಗೆದುಕೊಂಡಿದ್ದು. ಅಂದಿನ ಪಂದ್ಯದಿಂದ ಗಳಿಸಿದ ಹಣವನ್ನು ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ನೀಡುವಂತೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್, ಸೂರ್ಯಕುಮಾರ್ ಯಾದವ್ ನಿಮಗೆ ಧೈರ್ಯವಿದ್ದರೆ, ನಿಮ್ಮ ಬಿಸಿಸಿಐ ಮತ್ತು ಐಸಿಸಿಗೆ ಧೈರ್ಯವಿದ್ದರೆ, ನೀವು ಪ್ರಸಾರಕರು ಮತ್ತು ಜಾಹೀರಾತುದಾರರಿಂದ ಗಳಿಸಿದ ಹಣವನ್ನು ಆ ಕುಟುಂಬಗಳಿಗೆ ನೀಡಿ ಎಂದು ಸವಾಲು ಹಾಕಿದರು. ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ತಂಡದ ಆಟಗಾರರಿಗೆ ಕೈಕುಲುಕದೆ 140 ಕೋಟಿ ಜನರಿಗೆ ದೊಡ್ಡ ಉಪಕಾರ ಮಾಡಿದ್ದಾರೆ, ಗಡಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗಿಂತಲೂ ಇವರೇ ಶ್ರೇಷ್ಠರು. ಭಾರತೀಯ ಜನತಾ ಪಕ್ಷವು ಅವರ ಶ್ರೇಷ್ಠತೆಯ ಕುರಿತು ಡ್ರಮ್  ಬಾರಿಸುತ್ತಿದೆ ಎಂದ ಭಾರದ್ವಾಜ್​​, ಕೇಂದ್ರ ಸರ್ಕಾರ, ಯಾದವ್​​ಗೆ ಭಾರತ ರತ್ನ ನೀಡಿದರು ನೀಡಬಹುದು ಎಂದು ವ್ಯಂಗ್ಯವಾಡಿದರು.

ಈ ಗೆಲವು ಅವರೆಲ್ಲರಿಗೂ ಅರ್ಪಣೆ

ಪಂದ್ಯದ ನಂತರ ಮಾತನಾಡಿದ್ದ ಸೂರ್ಯಕುಮಾರ್ ಯಾದವ್, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬದೊಂದಿಗೆ ನಿಲ್ಲಲು ಇದು ಸೂಕ್ತ ಸಂದರ್ಭ, ಈ ವೇಳೆ ನಮ್ಮ ತಂಡ ಅವರೆಲ್ಲರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಈ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು ಮತ್ತು ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇವೆ, ಅವರೆಲ್ಲರು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಎಂದು ಹೇಳಿದ್ದರು.

ಪಂದ್ಯದ ಹಿಂದಿನ ದಿನ ಮಾತನಾಡಿದ್ದ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ನಮ್ಮ ಆಟಗಾರರು ದೇಶದ ಜನರ ಭಾವನೆಗಳನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದ್ದರು. ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರು ಕೂಡ ಅದೇ ರೀತಿ ವರ್ತಿಸಿದರು.

ಸೂಪರ್​​ 4 ಹಂತಕ್ಕೆ ಭಾರತ

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಓಮನ್ ತಂಡ ಸೋತ ನಂತರ ಟೀಮ್ ಇಂಡಿಯಾ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಮತ್ತೊಮ್ಮೆ ಭಾರತ ವಿರುದ್ಧ ಆಡುವ ಅವಕಾಶ ಪಡೆಯಲು ಪಾಕಿಸ್ತಾನ ಯುಎಇಯನ್ನು ಸೋಲಿಸಬೇಕಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net