

ನವದೆಹಲಿ: ಎರಡು ದಿನಗಳ ಕಾಲ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತೆಕ್ಕೆಗೆ ಯುವ ಮತ್ತು ಸ್ಟಾರ್ ಆಲ್ರೌಂಡ್ ಆಟಗಾರರನ್ನು ಅತಿ ಕಡಿಮೆ ಬಜೆಟ್ನಲ್ಲಿ ಖರೀದಿ ಮಾಡಿ, ಇತರೆ ಫ್ರಾಂಚೈಸಿಗಳಲ್ಲಿ ಹುಬ್ಬೇರಿಸಿತು. ಒಂದೆಡೆ ಇದು ಕ್ರಿಕೆಟ್ ಪ್ರಿಯರ ಖುಷಿಗೆ ಕಾರಣವಾದರೆ, ಮತ್ತೊಂದೆಡೆ, ತಮ್ಮ ತಂಡದ ವೇಗಿ ದೀಪಕ್ ಚಹರ್ರನ್ನು ಉಳಿಸಿಕೊಳ್ಳದೆ ಹೋಗಿದ್ದು, ಹಲವರಿಗೆ ತೀವ್ರ ಬೇಸರ ಮೂಡಿಸಿತು. ಸದ್ಯ ಈ ವಿಷಯವನ್ನು ಮುಂದಿಟ್ಟು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra ), ಇದೊಂದು ರೀತಿ ಅವರ ಹುಡುಗಿ ಯಾರೊಂದಿಗೋ ಓಡಿ ಹೋದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ದೀಪಕ್ ಚಹಾರ್ರನ್ನು 2025ರ ಐಪಿಎಲ್ ಬಿಡ್ಡಿಂಗ್ನಲ್ಲಿ ಉಳಿಸಿಕೊಳ್ಳಲು ವಿಫಲರಾದಾಗ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೇಮಿಂಗ್ ಕೊಟ್ಟ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಮಾತನಾಡಿದ ಆಕಾಶ್ ಚೋಪ್ರಾ, "ಇಡೀ ಹರಾಜು ಪ್ರಕ್ರಿಯೆಯಲ್ಲಿ ದೀಪಕ್ರನ್ನು ಖರೀದಿ ಮಾಡುವಲ್ಲಿ ಮಾತ್ರ ಸಿಎಸ್ಕೆ ವಿಫಲವಾಯಿತು. ಉಳಿದೆಲ್ಲಾ ಖರೀದಿ ಕೂಡ ಅದ್ಭುತವಾಗಿದೆ. ವೇಗಿಯನ್ನು ರಿಟೇನ್ ಮಾಡಿಕೊಳ್ಳಲು ಐದು ಫ್ರಾಂಚೈಸಿಗಳು ಹಿಂದೇಟು ಹಾಕಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ 9.25 ಕೋಟಿ ರೂ. ಕೊಟ್ಟು, ಚಹರ್ರನ್ನು ತಮ್ಮ ತಂಡಕ್ಕೆ ಖರೀದಿಸಿತು" ಎಂದರು.
"ಸ್ಯಾಮ್ ಕರನ್ ಸೇರಿದಂತೆ ಕೆಲವು ಆಟಗಾರರನ್ನು ಖುಷಿ ಖುಷಿಯಿಂದಲೇ ಖರೀದಿಸಿದ ಸ್ಟೀಫನ್ ಫ್ಲೇಮಿಂಗ್, ದೀಪಕ್ ಚಹಾರ್ ವಿಚಾರದಲ್ಲಿ ಮಾತ್ರ ಕಣ್ಣೀರಾಕುವಂತೆ ಮುಖ ಮಾಡಿದ್ದರು. ಇದನ್ನು ನೋಡಿದಾಗ ನನಗನಿಸಿದ್ದು, ಅವರ ಪಾಡು ಒಂದು ರೀತಿ ಇಷ್ಟು ವರ್ಷಗಳ ಕಾಲ ಜತೆಗಿದ್ದ ತನ್ನ ಹುಡುಗಿ ಈಗ ಯಾರೊಂದಿಗೋ ಓಡಿ ಹೋದಂತೆ ಇತ್ತು. ಅಸಲಿಗೆ ಈ ಹಿಂದೆ ಚಹರ್ ತಮ್ಮ ತಂಡದಲ್ಲಿದ್ದಾಗ ಹೇಗಿತ್ತೋ. ಅದೇ ತಂಡ ಅವರಿಗೆ ಬೇಕಿತ್ತು ಎಂಬುದು ಅಲ್ಲಿ ಕಾಣಿಸಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).