ಐಪಿಎಲ್​ನಲ್ಲಿ ಮಿಚೆಲ್​ ಸ್ಟಾರ್ಕ್​ ಪ್ರತಿ ಎಸೆತಕ್ಕೆ ಪಡೆಯಲಿರುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರಿ!

starc web
Published on

ನವದೆಹಲಿ: ಸನ್​ರೈಸರ್ಸ್​ ತಂಡ ಪ್ಯಾಟ್​ ಕಮ್ಮಿನ್ಸ್​ ನಾಯಕತ್ವದ ಜವಾಬ್ದಾರಿಯನ್ನೂ ನೀಡದಿದ್ದರೆ 20.50 ಕೋಟಿ ರೂ. ನೀಡಿರುವುದು ವ್ಯರ್ಥವಾಗಲಿದೆ ಎಂದಿರುವ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಕ್ರಿಕೆಟ್​ ವಿಶ್ಲೇಷಕ ಆಕಾಶ್​ ಚೋಪ್ರಾ, ಸ್ಟಾರ್ಕ್​ ಐಪಿಎಲ್​ನಲ್ಲಿ ಎಲ್ಲ 14 ಪಂದ್ಯ ಆಡಿ 4 ಓವರ್​ಗಳ ಕೋಟಾ ಪೂರ್ಣಗೊಳಿಸಿದರೂ, ಪ್ರತಿ ಎಸೆತಕ್ಕೆ 7.60 ಲಕ್ಷ ರೂ. ನೀಡಿದಂತಾಗುತ್ತದೆ. ಆದರೆ ಅವರೇನು ಐಪಿಎಲ್​ನ ಬೆಸ್ಟ್​ ಬೌಲರ್​ ಅಲ್ಲ. ಆ ಗೌರವ ಹೊಂದಿರುವ ಜಸ್​ಪ್ರೀತ್​ ಬುಮ್ರಾ ಪಡೆಯುವುದು 12 ಕೋಟಿ ರೂ. ಮಾತ್ರ ಎಂದಿದ್ದಾರೆ.

ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಆಸ್ಟ್ರೆಲಿಯಾದ ವೇಗಿಗಳಾದ ಮಿಚೆಲ್​ ಸ್ಟಾರ್ಕ್​ (24.75 ಕೋಟಿ ರೂ.) ಮತ್ತು ಪ್ಯಾಟ್​ ಕಮ್ಮಿನ್ಸ್​ಗೆ (20.50 ಕೋಟಿ ರೂ.) ಒಟ್ಟಾರೆ 45.25 ಕೋಟಿ ರೂ. ಬಿಡ್​ ಸಲ್ಲಿಸಿದ ನಡೆಯನ್ನು ಆಕಾಶ್​ ಚೋಪ್ರಾ ಟೀಕಿಸಿದ್ದಾರೆ. ಈ ಇಬ್ಬರು ವಿದೇಶಿ ಆಟಗಾರರಿಗೆ ಅರ್ಹತೆಗಿಂತ ಅಧಿಕ ಮೊತ್ತವನ್ನು ನೀಡಲಾಗುತ್ತಿದೆ ಎಂದಿರುವ ಅವರು, ಈ ಲೆಕ್ಕಾಚಾರದ ಪ್ರಕಾರ ಭಾರತದ ಕ್ರಿಕೆಟ್​ ತಾರೆಯರಾದ ವಿರಾಟ್​ ಕೊಹ್ಲಿ ಒಂದು ವೇಳೆ ಈಗ ಹರಾಜಿಗೆ ಹೋದರೆ 42 ಕೋಟಿ ರೂ. ವರೆಗೂ ಮೌಲ್ಯ ಪಡೆದುಕೊಳ್ಳಬಹುದು. ವೇಗಿ ಜಸ್​ಪ್ರೀತ್​ ಬುಮ್ರಾಗೆ 35 ಕೋಟಿ ರೂ.ವರೆಗೂ ಬಿಡ್​ ಸಲ್ಲಿಕೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ ಹರಾಜು ಇತಿಹಾಸದ ಇದುವರೆಗಿನ ಅಗ್ರ 10 ದುಬಾರಿ ಆಟಗಾರರ ಪಟ್ಟಿ ತೆಗೆದರೆ ಇದರಲ್ಲಿ 8 ವಿದೇಶಿ ಆಟಗಾರರೇ ಕಾಣಿಸಿಕೊಳ್ಳುತ್ತಾರೆ. ಯುವರಾಜ್​ ಸಿಂಗ್​ ಮತ್ತು ಇಶಾನ್​ ಕಿಶನ್​ ಮಾತ್ರ ಭಾರತೀಯರಾಗಿರುತ್ತಾರೆ.

"ಇದು ಇಂಡಿಯನ್​ ಪ್ರೀಮಿಯರ್​ ಲೀಗ್​. ಇದರಲ್ಲಿ ಭಾರತೀಯರಿಗೆ ಕಡಿಮೆ ಸಂಭಾವನೆ ಸಿಗುವುದು ಸರಿಯಲ್ಲ. ಆಟಗಾರರ ತಂಡ ನಿಷ್ಠೆಗೂ ಗೌರವ ಕೊಡಬೇಕಾಗುತ್ತದೆ. ನಾಳೆ ಕೊಹ್ಲಿ ಕೂಡ ಆರ್​ಸಿಬಿ ತ್ಯಜಿಸಿ ಹರಾಜಿಗೆ ಬಂದರೆ 42 ಕೋಟಿ ರೂ. ಮತ್ತು ಬುಮ್ರಾ ಮುಂಬೈ ಬಿಟ್ಟುಬಂದರೆ 35 ಕೋಟಿ ರೂ. ಪಡೆಯಬಹುದು. ಆದರೆ ಹಾಗಾಗುತ್ತಿಲ್ಲ. ಹೀಗಾಗಿ ವ್ಯವಸ್ಥೆಯಲ್ಲೇ ಏನೋ ಲೋಪವಿದೆ' ಎಂದು ಆಕಾಶ್​ ಚೋಪ್ರಾ ತನ್ನ ಯುಟ್ಯೂಬ್​ ಚಾನಲ್​ನಲ್ಲಿ ವಿವರಿಸಿದ್ದಾರೆ.

ಐಪಿಎಲ್​ನಲ್ಲಿ ಭಾರತೀಯರಿಗೆ ಹೆಚ್ಚಿನ ಮನ್ನಣೆ ಸಿಗುವಂತಾಗಲು ವಿದೇಶಿ ಆಟಗಾರರ ಸಂಭಾವನೆಗೆ ಮಿತಿ ಹಾಕಬೇಕು. ತಂಡದ ಒಟ್ಟು ಬಜೆಟ್​ 2 ಕೋಟಿ ರೂ. ಆಗಿದ್ದರೆ, ಅದರಲ್ಲಿ 1.5 ಅಥವಾ 1.75 ಕೋಟಿ ರೂ. ಭಾರತೀಯರಿಗೆ ಮೀಸಲಾಗಿರಬೇಕು. ಆಗ ಮಾತ್ರ ಭಾರತೀಯರಿಗೆ ನ್ಯಾಯ ಸಲ್ಲಿಸಲು ಸಾಧ್ಯ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net