

ಸಿಡ್ನಿ: ಟೀಮ್ ಇಂಡಿಯಾದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ( Shreyas Iyer ) ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಬಹಳ ಚಿಂತಿತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡ ಅಯ್ಯರ್, ಸಿಡ್ನಿ ನಗರದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ, ಐಸಿಯುನಿಂದ ಅಯ್ಯರ್ ಹೊರಬಂದಿದ್ದೇ ಆದರೂ ಅವರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದೆ ಎಂಬ ವರದಿಗಳು ಸೂಚಿಸಿವೆ.
ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಮೋಫ ಕ್ಯಾಚ್ ಹಿಡಿಯಲು ಜಿಗಿದ ಅಯ್ಯರ್ ಅವರಿಗೆ ಪಕ್ಕೆಲುಬಿನ ಗಾಯವಾಗಿಯಿತು. ಈ ಗಾಯದ ಪರಿಣಾಮದಿಂದಾಗಿ ಆಂತರಿಕ ರಕ್ತಸ್ರಾವವಾಯಿತು. ಹೀಗಾಗಿ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಹಿಮ್ಮುಖವಾಗಿ ಓಡಿ, ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಲೆಕ್ಸ್ ಕ್ಯಾರಿ ಔಟ್ ಮಾಡುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದರು. ಈ ವೇಳೆ ಆದ ಎಡವಟ್ಟಿನಿಂದ ಅವರಿಗೆ ಬಲವಾದ ಪೆಟ್ಟು ಬಿದ್ದಿತು.
ಎನ್ಡಿಟಿವಿ ವರದಿ ಪ್ರಕಾರ, ಮುಂದಿನ 7 ದಿನಗಳವರೆಗೂ ಅಯ್ಯರ್ ಆಸ್ಪತ್ರೆಯಲ್ಲೇ ಉಳಿಯಬೇಕಿದೆ. ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿ ಮೇಲೆ ಕಣ್ಣಿಟ್ಟಿದ್ದು, ಆಂತರಿಕ ರಕ್ತಸ್ರಾವವಾದ ಜಾಗದಲ್ಲಿ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳಬೇಕಿದೆ. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಯ್ಯರ್ ಅವರ ಕುಟುಂಬ ಆದಷ್ಟು ಬೇಗ ಸಿಡ್ನಿಗೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದೆ. ವಾರಾಂತ್ಯವಾಗಿದ್ದರಿಂದ ಅರ್ಜಿ ಶೀಘ್ರವೇ ಮುಗಿದಿಲ್ಲ. ಮಗನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ವೀಸಾ ನೀಡುವಂತೆ ಸಂಬಂಧಿತ ಅಧಿಕಾರಿಗಳನ್ನು ಶ್ರೇಯಸ್ ಪೋಷಕರು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಅಯ್ಯರ್ ಆರೋಗ್ಯ ಸ್ಥಿತಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಕ್ರಿಯೆ ನೀಡಿದೆ. ಕ್ಯಾಚ್ ತೆಗೆದುಕೊಳ್ಳುವಾಗ ಅಯ್ಯರ್ ಅವರ ಪಕ್ಕೆಲುಬುಗಳಿಗೆ (ಎಡ) ಗಾಯವಾಗಿದೆ. ಪ್ರಸ್ತುತ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ,(ಏಜೆನ್ಸೀಸ್).