ಬ್ಯಾಡ್ಮಿಂಟನ್​ನಲ್ಲಿ ಮತ್ತೊಮ್ಮೆ ಹೊಸ ಸ್ಕೋರಿಂಗ್​ ಪದ್ಧತಿ ಪ್ರಯೋಗ

web bad
Published on

ನವದೆಹಲಿ: ಹೆಚ್ಚಿನ ವೀಕ್ಷಕರನ್ನು ಕ್ರೀಡೆಗೆ ಸೆಳೆಯುವ ಮತ್ತು ಪಂದ್ಯಗಳನ್ನು ಕಿರಿದಾಗಿಸುವ ಉದ್ದೇಶದಿಂದ ವಿಶ್ವ ಬ್ಯಾಡ್ಮಿಂಟನ್​ ಒಕ್ಕೂಟ (ಬಿಡಬ್ಲ್ಯುಎಫ್​) ಮುಂದಿನ ಏಪ್ರಿಲ್​ನಿಂದ 6 ತಿಂಗಳ ಕಾಲ ಆಯ್ದ ಟೂರ್ನಿಗಳಲ್ಲಿ ಹೊಸ 3/15 ಸ್ಕೋರಿಂಗ್​ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ.

ಏಪ್ರಿಲ್​ನಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್​ವರೆಗಿನ ಇಂಟರ್​ನ್ಯಾಷನಲ್​ ಚಾಲೆಂಜ್​, ಇಂಟರ್​ನ್ಯಾಷನಲ್​ ಸಿರೀಸ್​, ಫ್ಯೂಚರ್​ ಸಿರೀಸ್​ನಂಥ ಗ್ರೇಡ್​3 ಟೂರ್ನಿಗಳು, ಆಯ್ದ ಚಾಂಪಿಯನ್​ಷಿಪ್​, ರಾಷ್ಟ್ರೀಯ-ಅಂತಾರಾಷ್ಟ್ರೀಯ ಲೀಗ್​ಗಳು ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಈ ಹೊಸ 3/15 ಅಂಕ ಪದ್ಧತಿ ಪ್ರಾಯೋಗಿಕವಾಗಿ ಬಳಕೆಯಾಗಲಿದೆ.

ಪ್ರಸಕ್ತ 21 ಅಂಕಗಳ ಬೆಸ್ಟ್​ ಆಫ್​​ ತ್ರಿ (3/21) ಸ್ಕೋರಿಂಗ್​ ಪದ್ಧತಿ ಜಾರಿಯಲ್ಲಿದೆ. ಇದು 2006ರಲ್ಲಿ ಜಾರಿಗೆ ಬಂದಿತ್ತು. ಅದಕ್ಕೆ ಮುನ್ನ 2002ರಿಂದ ಅಲ್ಪಾವಧಿಗೆ 7/5 ಸ್ಕೋರಿಂಗ್​ ಪದ್ಧತಿ ಜಾರಿಯಲ್ಲಿತ್ತು. 2014ರಲ್ಲೊಮ್ಮೆ ಪ್ರಾಯೋಗಿಕವಾಗಿ 11/5 ಸ್ಕೋರಿಂಗ್​ ಪದ್ಧತಿ ಅಳವಡಿಸಲಾಗಿತ್ತು. ಈ ಹಿಂದೆ ಬ್ಯಾಡ್ಮಿಂಟನ್​ನ ಮೂಲ ಸ್ಕೋರಿಂಗ್​ ಪದ್ಧತಿಯಲ್ಲಿ ಪುರುಷರ ವಿಭಾಗ ಮತ್ತು ಡಬಲ್ಸ್​ನಲ್ಲಿ 3/15 ಸ್ಕೋರಿಂಗ್​ ಪದ್ಧತಿ ಇದ್ದರೆ, ಮಹಿಳೆಯರಲ್ಲಿ 3/11 ಸ್ಕೋರಿಂಗ್​ ಇತ್ತು ಮತ್ತು ಆಗ ಸರ್ವ್​ ಮಾಡಿದವರು ಮಾತ್ರ ಅಂಕ ಗಳಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net