ಚಾಂಪಿಯನ್ಸ್​ ಟ್ರೋಫಿಗೆ ಭಾರತೀಯ ಅಂಪೈರ್​ಗಳಿಲ್ಲ; ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಿತಿನ್​ ಮೆನನ್​, ಜಾವಗಲ್​ ಶ್ರೀನಾಥ್​!

web icc champ ump
Published on

ದುಬೈ: ಪಾಕಿಸ್ತಾನ ಆತಿಥ್ಯದ ಮುಂಬರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಭಾರತದ ಯಾವುದೇ ಅಂಪೈರ್​ ಅಥವಾ ಮ್ಯಾಚ್​ ರೆಫ್ರಿ ಆಯ್ಕೆಯಾಗಿಲ್ಲ. ಐಸಿಸಿ ಎಲೈಟ್​ ಪ್ಯಾನೆಲ್​ನಲ್ಲಿರುವ ಭಾರತೀಯ ಅಂಪೈರ್​ ನಿತಿನ್​ ಮೆನನ್​ ವೈಯಕ್ತಿಕ ಕಾರಣ ನೀಡಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವುದರಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಟೂರ್ನಿಗೆ ಒಟ್ಟು 12 ಅಂಪೈರ್​ಗಳ ಪಟ್ಟಿಯನ್ನು ಐಸಿಸಿ ಬುಧವಾರ ಬಿಡುಗಡೆಗೊಳಿಸಿದೆ. ಟೀಮ್​ ಇಂಡಿಯಾ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್​ ಶ್ರೀನಾಥ್​ ಟೂರ್ನಿಯ ಮ್ಯಾಚ್​ ರೆಫ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇತ್ತೀಚೆಗೆ ನಿರಂತರವಾಗಿ ಕಾರ್ಯನಿರ್ವಹಿಸಿದ್ದರಿಂದ ಶ್ರೀನಾಥ್​ ವಿಶ್ರಾಂತಿ ಬಯಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆಸ್ಟ್ರೆಲಿಯಾದ ಡೇವಿಡ್​ ಬೂನ್​, ಶ್ರೀಲಂಕಾದ ರಂಜನ್​ ಮದುಗಲೆ ಮತ್ತು ಜಿಂಬಾಬ್ವೆಯ ಆಂಡ್ರೋ ಪೈಕ್ರಾಫ್ಟ್​ ಟೂರ್ನಿಗೆ ಮೂವರು ಮ್ಯಾಚ್​ ರೆಫ್ರಿಗಳಾಗಿದ್ದಾರೆ.

ಬುಮ್ರಾ ಇಲ್ಲದಿದ್ದರೆ ಭಾರತದ ಚಾನ್ಸ್​ ಶೇ. 30-35 ಇಳಿಕೆ!

ವೇಗಿ ಜಸ್​ಪ್ರೀತ್​ ಬುಮ್ರಾ ಗಾಯದಿಂದಾಗಿ ಚಾಂಪಿಯನ್ಸ್​ ಟ್ರೋಫಿಗೆ ಅಲಭ್ಯರಾದರೆ, ಭಾರತ ತಂಡ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಶೇ. 30-35ರಷ್ಟು ಇಳಿಕೆಯಾಗಲಿದೆ. ಬುಮ್ರಾ ಇದ್ದರೆ ಸ್ಲಾಗ್​ ಓವರ್​ಗಳಲ್ಲಿ ರನ್​ ನಿಯಂತ್ರಣದ ಭರವಸೆ ಇರುತ್ತದೆ. ಆದರೆ ಅವರಿಲ್ಲದಿದ್ದರೆ ಪಂದ್ಯ ಸಂಪೂರ್ಣ ಭಿನ್ನವೆನಿಸುತ್ತದೆ ಎಂದು ಮಾಜಿ ಕೋಚ್​ ಹಾಗೂ ವೀಕ್ಷಕವಿವರಣೆಕಾರ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿದ್ದು, ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಅವರ ಫಿಟ್ನೆಸ್​ ಮತ್ತು ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡುವ ಬಗ್ಗೆ ಈ ವಾರ ಸ್ಪಷ್ಟ ಮಾಹಿತಿ ನೀಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net