

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಡೇಲ್ ಸ್ಟೈನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.
''ನಾನು ತುಂಬಾ ಪ್ರೀತಿಸುವ ಆಟಕ್ಕೆ ಈ ದಿನ ಅಧಿಕೃತ ವಿದಾಯ ಘೋಷಿಸುತ್ತಿದ್ದೇನೆ. ಕಹಿ ಸತ್ಯವಾದರೂ ಇದನ್ನು ಒಪ್ಪಿಕೊಳ್ಳಲೇಬೇಕು. ಕ್ರಿಕೆಟ್ ಪಯಣದಲ್ಲಿ ನನನ್ನು ಬೆಂಬಲಿಸಿದ ಕುಟುಂಬ, ತಂಡದ ಸಹ ಆಟಗಾರರು, ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಧನ್ಯವಾದ... 20 ವರ್ಷಗಳಿಂದ ತರಬೇತಿ, ಪಂದ್ಯ, ಪ್ರಯಾಣ, ಗೆಲುವು- ಸೋಲು, ಜೆಟ್ ಲ್ಯಾಗ್, ಎಂಜಾಯ್ಮೆಂಟ್ ಹಾಗೂ ಸಹೋಹದರತ್ವ... ಹೀಗೆ ಹೇಳಲು ಸಾಕಷ್ಟು ಸುಮದುರ ನೆನಪುಗಳಿವೆ..." ಎಂದು ಭಾವನಾತ್ಮಕವಾಗಿ ಟ್ವಿಟರ್ನಲ್ಲಿ ಬರೆದುಕೊಳ್ಳುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ಗೆ ಡೇಲ್ ಸ್ಟೈನ್ ನಿವೃತ್ತಿ ಘೋಷಿಸಿದ್ದಾರೆ.
ಈ ಹಿಂದೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಡೇಸ್ ಸ್ಟೈನ್, ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್ನಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕಿಕೆಟ್ ಕೆರಿಯರ್ ಆರಂಭಿಸಿದ್ದರು.
ಡೇಲ್ ಸ್ಟೈನ್ ಅವರು 125 ಏಕದಿನ ಪಂದ್ಯವನ್ನಾಡಿದ್ದು, 196 ವಿಕೆಟ್ ಪಡೆದಿದ್ದಾರೆ. 47 ಟಿ20 ಪಂದ್ಯ ಆಡಿದ್ದು, 64 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ 93 ಟೆಸ್ಟ್ ಕ್ರಿಕೆಟ್ನಲ್ಲಿ 439 ವಿಕೆಟ್ ಪಡೆದಿದ್ದಾರೆ. 2015ರ ಡಿಸೆಂಬರ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಟವಾಡುವಾಗ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಗುಣಮುಖರಾದರಾದರೂ ಮರು ವರ್ಷದಲ್ಲೇ ಮತ್ತೆ ಗಾಯಗೊಂಡರು. ಇದಾದ ಮರು ವರ್ಷ ಹಿಮ್ಮಡಿ ಗಾಯವಾಗಿ ಆಟದಿಂದ ಅನಿವಾರ್ಯವಾಗಿ ದೂರ ಉಳಿದಿದ್ದರು.