ರಾಷ್ಟ್ರೀಯ ಕ್ರಿಕೆಟ್ ಆಟಗಾರ, ಕರ್ನಾಟಕದ ಚಂದು ಲಮಾಣಿ ನಿಧನ

chandu lamani
Published on

ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ಗ್ರಾಮದ ನಿವಾಸಿ, ರಾಷ್ಟ್ರೀಯ ಕ್ರಿಕೆಟ್ ಆಟಗಾರ ಡಾ. ಚಂದು ಲಮಾಣಿ (37) ಅವರು ಶುಕ್ರವಾರ ಹೃದಯಾಘಾತದಿಂದ ಗೋವಾದಲ್ಲಿ ಮೃತಪಟ್ಟಿದ್ದಾರೆ. ಸ್ವಗ್ರಾಮ ಹರದಗಟ್ಟಿ ತಾಂಡಾದಲ್ಲಿ ಶನಿವಾರ ಅಂತ್ಯಸಂಸ್ಕಾರ ಜರುಗಿತು.

ಹರದಗಟ್ಟಿ ತಾಂಡಾದಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಚಂದ್ರು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಿಪಿಇಡಿ ಹಾಗೂ ಎಂಪಿ ಇಡಿ ಪೂರೈಸಿ ಪಿಎಚ್​ಡಿ ಪದವಿ ಪಡೆದಿದ್ದಾರೆ. ಗೋವಾ ರಾಜ್ಯದ ಕ್ರೀಡಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತ ಅಂತಾರಾಜ್ಯಮಟ್ಟದಲ್ಲಿ ಪ್ರತಿಭೆ ಮೆರೆದಿದ್ದಾರೆ.

ಡಾ. ಚಂದ್ರು ಅವರು ಗೋವಾ ರಣಜಿ ತಂಡ ಪ್ರತಿನಿಧಿಸಿದ್ದು, ಕೆನಡಾ ಪ್ರೀಮಿಯರ್ ಲೀಗ್​ನಲ್ಲಿ ಅಂತಾರಾಷ್ಟ್ರಿಯ ಆಟಗಾರರನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ಪಾಪ್ ಡ್ಲುಪ್ಲೆಸಿಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದು ಇವರ ಹೆಗ್ಗಳಿಕೆ. ಹಲವಾರು ಕ್ರಿಕೆಟ್ ಪ್ರತಿಭೆಗಳಿದ್ದು ಅವುಗಳನ್ನು ಬೆಳಕಿಗೆ ತರುವ ಕಾರ್ಯವಾಗಬೇಕೆಂಬ ಆದಮ್ಯ ಉತ್ಸಾಹ ಇವರದಾಗಿತ್ತು. ಕಳೆದ ತಿಂಗಳು ಹರದಗಟ್ಟಿ ತಾಂಡಾಕ್ಕೆ ಆಗಮಿಸಿದ್ದ ಇವರು, 8 ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದರು. ಚಂದು ಅವರಿಗೆ ಪತ್ನಿ, ತಂದೆ, ತಾಯಿ ಸಹೋದರರು ಇದ್ದಾರೆ.

ವಿಧಿಯ ಆಟಕ್ಕೆ ಡಾ. ಚಂದು ಲಮಾಣಿ ಹಠಾತ್ ನಿಧನಕ್ಕೆ ಗೋವಾ ರಾಜ್ಯ ಅಲ್ಲದೆ, ಕರ್ನಾಟಕ ಕ್ರೀಡಾ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಹರದಗಟ್ಟಿ ಗ್ರಾಮದ ಗ್ರಾಮಿಣ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದು, ಗ್ರಾಮ ಹಾಗೂ ಮನೆಯಲ್ಲಿ ಶೋಕ ಆವರಿಸಿದೆ. ಯುವ ಕ್ರೀಡಾಪಟುವಿಗೆ ಗ್ರಾಮ ಸೇರಿ ಎಲ್ಲೆಡೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net