

ಕೊಲ್ಕತ್ತಾ: ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಪ್ರವೇಶಿಸುತ್ತಾರಾ? ಇಂತಹದ್ದೊಂದು ಚರ್ಚೆ ಶುರುವಾಗಿದೆ. ಬುಧವಾರ ಸಂಜೆ ಗಂಗೂಲಿ ಅವರು ಮಾಡಿದ ಆ ಒಂದು ಟ್ವೀಟ್ ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ಇದೆಲ್ಲವೂ ವದಂತಿ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ಕೊಡಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಡಿಸಿದ್ದಾರೆ.
'1992ರಲ್ಲಿ ಶುರುವಾದ ನನ್ನ ಕ್ರಿಕೆಟ್ ಜರ್ನಿ 2022ರ ವರೆಗೆ ಸಾಗಿ ಬಂದಿದೆ. ಈ 30 ವರ್ಷದಲ್ಲಿ ಕ್ರಿಕೆಟ್ನಿಂದ ಗೌರವ, ಅವಕಾಶ... ಸೇರಿದಂತೆ ಎಲ್ಲವೂ ನನಗೆ ಸಿಕ್ಕಿದೆ. ಎಲ್ಲರೂ ನನಗೆ ಪ್ರೀತಿಯಿಂದ ಸಹಕರಿಸಿದ್ದಾರೆ. ಈ ಪಯಣದಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವೆ. ಇಂದು ನಾನು ಮಹತ್ವದ ಯೋಜನೆ ಹಾಕಿಕೊಂಡಿರುವೆ. ಇನ್ಮುಂದೆ ತುಂಬಾ ಜನರಿಗೆ ಸಹಾಯ ಮಾಡಬೇಕು. ಈ ಕೆಲಸಕ್ಕೆ ನಿಮ್ಮೆಲ್ಲರ ಸಹಕಾರ ಇರುತ್ತೆ ಎಂದು ನಂಬಿದ್ದೇನೆ' ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.
ಇದನ್ನು ನೋಟಿದ ನೆಟ್ಟಿಗರು, ಅಭಿಮಾನಿಗಳು, ಸಾರ್ವಜನಿಕರು ಗಂಗೂಲಿ ಅವರ ಮುಂದಿನ ಪ್ಲಾನ್ ಏನಿರಬಹುದು? ರಾಜಕೀಯಕ್ಕೆ ಹೋಗುವ ಸುಳಿವು ಕೊಟ್ಟರೇ? ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಬೇಕು ಎಂದೆಲ್ಲ ಚರ್ಚಿಸುತ್ತಿದ್ದಾರೆ.