ಸ್ಮೃತಿ ಕಥೆಯೂ ಅದೇ ಆಗಿತ್ತು! ಆರ್‌ಸಿಬಿ ತೊರೆಯಲು ನಿರ್ಧರಿಸಿದ್ದರ ಬಗ್ಗೆ ಅಸಲಿ ಕಥೆ ಬಿಚ್ಚಿಟ್ಟ ರೇಣುಕಾ | Renuka Singh

ಸ್ಮೃತಿ ಕಥೆಯೂ ಅದೇ ಆಗಿತ್ತು! ಆರ್‌ಸಿಬಿ ತೊರೆಯಲು ನಿರ್ಧರಿಸಿದ್ದರ ಬಗ್ಗೆ ಅಸಲಿ ಕಥೆ ಬಿಚ್ಚಿಟ್ಟ ರೇಣುಕಾ | Renuka Singh
Published on: 

Renuka Singh: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದ ಟೀಮ್​ ಇಂಡಿಯಾ ಸ್ಟಾರ್ ವೇಗಿ ರೇಣುಕಾ ಸಿಂಗ್, ಒಂದು ಹಂತದಲ್ಲಿ ತಂಡವನ್ನೇ ತೊರೆಯಲು ಗಂಭೀರ ಚಿಂತನೆ ನಡೆಸಿದ್ದರಂತೆ. ಭಾರೀ ಬೆಲೆಗೆ ಹರಾಜಾಗಿದ್ದರ ಒತ್ತಡ ಹಾಗೂ ಸತತ ಕಳಪೆ ಪ್ರದರ್ಶನಗಳು ತಮ್ಮ ಮೇಲೆ ಯಾವ ರೀತಿ ಮಾನಸಿಕ ಪರಿಣಾಮ ಬೀರಿದ್ದವು ಎಂಬುದನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಪರ ಮೂರು ಸೀಸನ್‌ಗಳಲ್ಲಿ ಒಟ್ಟು 23 ಪಂದ್ಯಗಳನ್ನು ಆಡಿರುವ ರೇಣುಕಾ ಸಿಂಗ್, 8.34ರ ಆರ್ಥಿಕತೆಯಲ್ಲಿ ಕೇವಲ 13 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ವಿಶೇಷವಾಗಿ ಅವರ ಮೊದಲ ಸೀಸನ್ ಅತ್ಯಂತ ಕಷ್ಟಕರವಾಗಿತ್ತು. ಆರು ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದ ಅವರ ಎಕಾನಮಿ ರೇಟ್ 9.54 ರಷ್ಟಿತ್ತು.

ತಮ್ಮ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಆ ಸಂದರ್ಭದಲ್ಲಿ, ರೇಣುಕಾ ಅವರು ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಬಳಿ ತೆರಳಿ, ನನಗೆ ಇನ್ನು ಮುಂದೆ ಆಡಲು ಇಷ್ಟವಿಲ್ಲ, ಯಾಕೆಂದರೆ ನನಗೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಆಸಕ್ತಿದಾಯಕ ಸಂಗತಿಯೆಂದರೆ, ಆ ಸಂದರ್ಭದಲ್ಲಿ ಸ್ವತಃ ನಾಯಕಿ ಸ್ಮೃತಿ ಮಂಧಾನ ಕೂಡ ಕಳಪೆ ಫಾರ್ಮ್ ಎದುರಿಸುತ್ತಿದ್ದರು (ಬ್ಯಾಟಿಂಗ್ ಸರಾಸರಿ ಕೇವಲ 18ರಷ್ಟಿತ್ತು). ರೇಣುಕಾ ಮಾತಿಗೆ ಪ್ರತಿಕ್ರಿಯಿಸಿದ್ದ ಸ್ಮೃತಿ, ನಾನು ಕೂಡ ಸರಿಯಾಗಿ ಆಡುತ್ತಿಲ್ಲ ಎಂದಿದ್ದರು. ಆದರೂ ತಮ್ಮ ವೈಫಲ್ಯದ ಹೊರೆಯನ್ನು ತಡೆಯಲಾರದೆ ರೇಣುಕಾ ಕಣ್ಣೀರಿಟ್ಟಿದ್ದರು.

Also Read
ಕೇವಲ 15ನೇ ವಯಸ್ಸಲ್ಲಿ 530 ಪಂದ್ಯ, 13,000 ರನ್ಸ್​!....ಡಬ್ಲ್ಯುಪಿಎಲ್ ಪ್ರವೇಶಿಸಿ ದಾಖಲೆ ಬರೆದ ಕನ್ನಡತಿ...ಯಾರೀ ಉಮಾ ಕಶ್ವಿ..?|Uma Kashvi
ಸ್ಮೃತಿ ಕಥೆಯೂ ಅದೇ ಆಗಿತ್ತು! ಆರ್‌ಸಿಬಿ ತೊರೆಯಲು ನಿರ್ಧರಿಸಿದ್ದರ ಬಗ್ಗೆ ಅಸಲಿ ಕಥೆ ಬಿಚ್ಚಿಟ್ಟ ರೇಣುಕಾ | Renuka Singh

ಮೊದಲ ಡಬ್ಲ್ಯುಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ರೇಣುಕಾ ಸಿಂಗ್ ಅವರನ್ನು ಭರ್ತಿ 1.50 ಕೋಟಿ ರೂ. ನೀಡಿ ಖರೀದಿಸಿತ್ತು. ಇದು ಅವರ ಮೇಲಿನ ಒತ್ತಡವನ್ನು ದುಪ್ಪಟ್ಟುಗೊಳಿಸಿತ್ತು. ಈ ಕುರಿತು ಮಾತನಾಡಿರುವ ಅವರು, ನನ್ನ ಜೀವನದಲ್ಲಿ ನಾನು ಎಂದಿಗೂ ಅಷ್ಟು ಹಣವನ್ನು ಕಂಡಿರಲಿಲ್ಲ. ಇಷ್ಟು ದೊಡ್ಡ ಮೊತ್ತ ನೀಡಿ ನನ್ನ ಮೇಲೆ ನಂಬಿಕೆ ಇಟ್ಟಿರುವ ತಂಡಕ್ಕೆ ನಾನು ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಆತಂಕ ಕಾಡುತ್ತಿತ್ತು. ಮೊದಲ ಸೀಸನ್ ಆಗಿದ್ದರಿಂದ ಎಲ್ಲವೂ ಗೊಂದಲಮಯವಾಗಿತ್ತು ಎಂದಿದ್ದಾರೆ.

2024ರ ಡಬ್ಲ್ಯುಪಿಎಲ್ ಸೀಸನ್‌ನಲ್ಲೂ ರೇಣುಕಾ ಕಳಪೆ ಪ್ರದರ್ಶನ ಮುಂದುವರಿಸಿ 10 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಪಡೆದಿದ್ದರು. ಆದರೆ, ಇದರ ಮುಂದಿನ ಆವೃತ್ತಿಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಅವರು, 7 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ತಮ್ಮ ಹಳೆಯ ಲಯಕ್ಕೆ ಮರಳಿದ್ದರು.

ಆರ್‌ಸಿಬಿ ಅಭಿಮಾನಿಗಳ ಬಗ್ಗೆ ರೇಣುಕಾ ಮಾತು

2026ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ರೇಣುಕಾ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ನಂತರ ಗುಜರಾತ್ ಜೈಂಟ್ಸ್ ತಂಡವು ಅವರನ್ನು 60 ಲಕ್ಷ ರೂ.ಗಳಿಗೆ ಖರೀದಿಸಿತು. ಆರ್‌ಸಿಬಿ ಮತ್ತು ಗುಜರಾತ್ ತಂಡಗಳ ವಾತಾವರಣ ಒಂದೇ ರೀತಿಯಾಗಿದ್ದರೂ, ಆರ್‌ಸಿಬಿ ಪರ ಆಡುವಾಗ ಅಭಿಮಾನಿಗಳ ಬೃಹತ್ ಬಳಗವಿರುವ ಕಾರಣ ಸಹಜವಾಗಿಯೇ ಹೆಚ್ಚಿನ ಒತ್ತಡವಿರುತ್ತದೆ ಎಂದು ರೇಣುಕಾ ತಿಳಿಸಿದ್ದಾರೆ.

ಆರ್‌ಸಿಬಿಯಲ್ಲಿ ಫ್ಯಾನ್ ಫಾಲೋಯಿಂಗ್ ತುಂಬಾ ದೊಡ್ಡದಿದೆ. ಹಾಗಾಗಿ ಅಲ್ಲಿ ಸ್ವಲ್ಪ ಹೆಚ್ಚಿನ ಒತ್ತಡವಿರುತ್ತದೆ. ಸತತ ಎರಡು ಸೀಸನ್‌ಗಳು ಚೆನ್ನಾಗಿ ಹೋಗದಿದ್ದಾಗ ಅಭಿಮಾನಿಗಳ ನಿರೀಕ್ಷೆಯ ಭಾರ ನಮ್ಮ ಮೇಲೆ ಬೀಳುತ್ತದೆ. ಆದರೆ, ಗುಜರಾತ್ ಜೈಂಟ್ಸ್ ತಂಡದಲ್ಲೂ ವಾತಾವರಣ ತುಂಬಾ ಚೆನ್ನಾಗಿದೆ. ಆರ್‌ಸಿಬಿಯಲ್ಲಿ ಸ್ಮೃತಿ ಮಂಧಾನ ಹೇಗೆ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುತ್ತಿದ್ದರೋ, ಗುಜರಾತ್‌ನಲ್ಲೂ ಅದೇ ಪರಿಸರವಿದೆ. ಅಂತಿಮವಾಗಿ ನಾವು ಯಾವ ತಂಡಕ್ಕಾಗಿ ಆಡುತ್ತೇವೆ ಎಂಬುದು ಮುಖ್ಯವಲ್ಲ, ಮೈದಾನದಲ್ಲಿ ನಮ್ಮ ಪ್ರದರ್ಶನ ಹೇಗಿದೆ ಎಂಬುದೇ ಮುಖ್ಯ ಎಂದು ರೇಣುಕಾ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಜೈಂಟ್ಸ್ ಪರ ಆಡಿದ ಮೊದಲ ಸೀಸನ್‌ನಲ್ಲಿ 9 ಪಂದ್ಯಗಳಿಂದ 7 ವಿಕೆಟ್‌ಗಳನ್ನು ಪಡೆದಿದ್ದ ರೇಣುಕಾ ಅವರ ಪ್ರದರ್ಶನವನ್ನು ಮೆಚ್ಚಿ, ಫ್ರಾಂಚೈಸಿ ಅವರನ್ನು ಮುಂದಿನ ಸೀಸನ್‌ಗಾಗಿ ರಿಟೈನ್ ಮಾಡಿಕೊಂಡಿದೆ. ಸದ್ಯ ತಮ್ಮ ಹಳೆಯ ಲಯ ಹಾಗೂ ಆತ್ಮವಿಶ್ವಾಸವನ್ನು ಮರಳಿ ಪಡೆದಿರುವ ರೇಣುಕಾ ಸಿಂಗ್, ಮುಂಬರುವ ಡಬ್ಲ್ಯುಪಿಎಲ್ ಆವೃತ್ತಿಯಲ್ಲಿ ಗುಜರಾತ್ ಪರ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ(ಏಜೆನ್ಸೀಸ್​).