ಕೇವಲ 15ನೇ ವಯಸ್ಸಲ್ಲಿ 530 ಪಂದ್ಯ, 13,000 ರನ್ಸ್​!....ಡಬ್ಲ್ಯುಪಿಎಲ್ ಪ್ರವೇಶಿಸಿ ದಾಖಲೆ ಬರೆದ ಕನ್ನಡತಿ...ಯಾರೀ ಉಮಾ ಕಶ್ವಿ..?|Uma Kashvi

ಡಬ್ಲ್ಯುಪಿಎಲ್ ಪ್ರವೇಶಿಸಿ ದಾಖಲೆ ಬರೆದ ಕನ್ನಡತಿ ಉಮಾ ಕಶ್ವಿ
ಡಬ್ಲ್ಯುಪಿಎಲ್ ಪ್ರವೇಶಿಸಿ ದಾಖಲೆ ಬರೆದ ಕನ್ನಡತಿ ಉಮಾ ಕಶ್ವಿ
Published on: 

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ ಸದ್ದು ಮಾಡಿರುವ ಅನೇಕ ಹೆಸರುಗಳಲ್ಲಿ ನಮ್ಮ ರಾಜ್ಯದ ಆಲ್‌ರೌಂಡರ್ ಕಶ್ವಿ ಕಂದಿಕುಪ್ಪ (Uma Kashvi) ಕೂಡ ಒಬ್ಬರು. ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ (15 ವರ್ಷ) ಫ್ರಾಂಚೈಸಿ ಒಪ್ಪಂದ ಗಿಟ್ಟಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಉಮಾ ಕಶ್ವಿ ಎಂದು ಕರೆಸಿಕೊಳ್ಳುವ ಈ ಪ್ರತಿಭಾವಂತ ಆಟಗಾರ್ತಿಗೆ ದೆಹಲಿ ಕ್ಯಾಪಿಟಲ್ಸ್ ತಂಡವು 10 ಲಕ್ಷ ರೂಪಾಯಿ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

2011ರ ಏಪ್ರಿಲ್ 9 ರಂದು ಜನಿಸಿರುವ ಕಶ್ವಿ ಕಂದಿಕುಪ್ಪ, ಕಳೆದ ವರ್ಷ 16ನೇ ವಯಸ್ಸಿನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಸೇರಿದ್ದ ಹರಿಯಾಣದ ದೀಯಾ ಯಾದವ್ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಿಂದ 14ನೇ ವಯಸ್ಸಿಗೆ ಆಯ್ಕೆಯಾಗಿದ್ದ ವೈಭವ್ ಸೂರ್ಯವಂಶಿ ಅವರಿಗಿಂತ ಕಶ್ವಿ ಕಂದಿಕುಪ್ಪ ಹಿರಿಯವರಾಗಿದ್ದರೂ, ಡಬ್ಲ್ಯುಪಿಎಲ್ ಇತಿಹಾಸದ ಅತಿ ಕಿರಿಯ ಆಟಗಾರ್ತಿ ಎಂಬ ದಾಖಲೆ ಇವರ ಹೆಸರಿಗೆ ಸೇರಿದೆ.

ಕಶ್ವಿ ಕಂದಿಕುಪ್ಪ ಕ್ರಿಕೆಟ್ ಸಾಧನೆಯ ಹಾದಿ!

ಬಲಗೈ ಬ್ಯಾಟರ್ ಹಾಗೂ ಆಫ್-ಸ್ಪಿನ್ ಬೌಲರ್ ಆಗಿರುವ ಕಶ್ವಿ, ಇತ್ತೀಚೆಗೆ ನಡೆದ ಬಿಸಿಸಿಐ ಮಹಿಳಾ ಅಂಡರ್-15 ಏಕದಿನ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದರು. ಬರೋಬ್ಬರಿ 172ರ ಸರಾಸರಿಯಲ್ಲಿ 3 ಶತಕಗಳು ಹಾಗೂ 1 ಅರ್ಧಶತಕ ಸೇರಿದಂತೆ ಒಟ್ಟು 516 ರನ್ ಕಲೆಹಾಕುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದರು.

ಮಾಧ್ಯಮವೊಂದರ ವರದಿಯ ಪ್ರಕಾರ, ಕಶ್ವಿ ಕರ್ನಾಟಕದಾದ್ಯಂತ ಇದುವರೆಗೆ 530 ಪಂದ್ಯಗಳಲ್ಲಿ ಒಟ್ಟು 13,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 24 ಶತಕಗಳು ಹಾಗೂ 68 ಅರ್ಧಶತಕಗಳು ಸೇರಿವೆ. ಕರ್ನಾಟಕ ಅಂಡರ್-15 ತಂಡದ ನಾಯಕತ್ವ ವಹಿಸಿರುವ ಅವರು, ಮಹಾರಾಣಿ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನೂ ಮುನ್ನಡೆಸಿದ್ದಾರೆ. ಇದಲ್ಲದೆ, ಮಹಿಳಾ ಅಂಡರ್-19 ಟಿ20 ಟ್ರೋಫಿ ಗೆಲುವು, ಅಂಡರ್-19 ಏಕದಿನ ಟೂರ್ನಿಯ ಸೆಮಿಫೈನಲ್ ಪ್ರವೇಶ ಹಾಗೂ ಕರ್ನಾಟಕ ಮಹಿಳಾ ಲೀಗ್ ಪ್ರಶಸ್ತಿಯನ್ನು ಹಂಚಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ.

Also Read
WPL 2027 ಮಿನಿ ಹರಾಜು ಅಂತ್ಯ: ಸೋಫಿ ಮೋಲಿನೆಕ್ಸ್‌ಗೆ 1.1 ಕೋಟಿ ಜಾಕ್‌ಪಾಟ್; ಎಲ್ಲಾ ತಂಡಗಳ ಫೈನಲ್ ಲಿಸ್ಟ್ ಇಲ್ಲಿದೆ! WPL Auction
ಡಬ್ಲ್ಯುಪಿಎಲ್ ಪ್ರವೇಶಿಸಿ ದಾಖಲೆ ಬರೆದ ಕನ್ನಡತಿ ಉಮಾ ಕಶ್ವಿ

ಕಳೆದ ಜೂನ್-ಜುಲೈ ತಿಂಗಳಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಕಶ್ವಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಕೊಡುಗೆ ನೀಡಿದ್ದರು. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ವಿಕೆಟ್ ಕಬಳಿಸಿ ತಮ್ಮ ಆಲ್‌ರೌಂಡರ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಆರ್‌ಸಿಬಿ ಜೊತೆಗಿನ ನಂಟು!

ಕೇವಲ ಏಳೂವರೆ ವಯಸ್ಸಿನಲ್ಲೇ ತಮ್ಮ ಮನೆಯ ಹತ್ತಿರದ ಅಕಾಡೆಮಿಯಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಕಶ್ವಿ, ಆರಂಭದಲ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡಿದ್ದರು. ನಂತರ ಕ್ರಿಕೆಟ್‌ನ ಮೂಲಭೂತ ಅಂಶಗಳನ್ನು ಗಟ್ಟಿಗೊಳಿಸಿಕೊಂಡರು. ಇದಾದ ಬಳಿಕ ನೈಸ್ ಅಕಾಡೆಮಿಗೆ ಸೇರ್ಪಡೆಗೊಂಡ ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಸಿಕ್ಕವು.

ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ತರಬೇತಿ ಪಡೆದಿರುವ ಅನುಭವ ಹೊಂದಿರುವ ಕಶ್ವಿ, ಆ ಅನುಭವವೇ ತಮಗೆ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವದಿಂದ ಆಡಲು ಮತ್ತು ತಮ್ಮ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇಡಲು ಕಲಿಸಿಕೊಟ್ಟಿದೆ ಎಂದು ಡೆಕ್ಕನ್ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಸದ್ಯ ಡಬ್ಲ್ಯುಪಿಎಲ್ ಅಂಗಳಕ್ಕೆ ಪದಾರ್ಪಣೆ ಮಾಡಿರುವ ಕಶ್ವಿ ಕಂದಿಕುಪ್ಪ ಅವರಿಂದ ದೆಹಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net