ಯಾವುದೇ ಭದ್ರತೆ ಇಲ್ಲದೆ ಆರಾಮಾಗಿ ಓಡಾಡಿದ RCB ವಿದೇಶಿ ಆಟಗಾರ್ತಿಯರು: ಕಳಚಿಬಿತ್ತು ಬಾಂಗ್ಲಾದೇಶದ ಮುಖವಾಡ!

ಆರ್​ಸಿಬಿ ತಂಡದ ವಿದೇಶಿ ಆಟಗಾರ್ತಿಯರು
ಆರ್​ಸಿಬಿ ತಂಡದ ವಿದೇಶಿ ಆಟಗಾರ್ತಿಯರು
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ಭದ್ರತೆ ಇಲ್ಲದೆ ಜನನಿಬಿಡ ರಸ್ತೆಯಲ್ಲೇ ಓಡಾಡಿದ ಆರ್​ಸಿಬಿ ಆಟಗಾರ್ತಿಯರು
  • ಭಾರತದಲ್ಲಿ ತಮ್ಮ ಭದ್ರತೆಯನ್ನು ಪ್ರಶ್ನೆ ಮಾಡಿದ ಬಾಂಗ್ಲಾದೇಶದ ಮುಖವಾಡ ಕಳಚಿ ಬಿತ್ತು
  • ವಡೋದರಾದಲ್ಲಿ ಬೀದಿ ಸುತ್ತಿದ ಲಾರೆನ್​ ಬೆಲ್​, ನಾಡಿನ್​ ಡಿ ಕ್ಲರ್ಕ್​ ಮತ್ತು ಜಾರ್ಜಿಯಾ ವೊಲ್
ನವದೆಹಲಿ: ಯಾವುದೇ ಭದ್ರತೆ ಇಲ್ಲದೆ ಜನನಿಬಿಡ ರಸ್ತೆಯಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ವಿದೇಶಿ ಆಟಗಾರ್ತಿಯರು ಆರಾಮಾಗಿ ಅಡ್ಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ತಮ್ಮ ಭದ್ರತೆಯನ್ನು ಪ್ರಶ್ನೆ ಮಾಡಿದ ಬಾಂಗ್ಲಾದೇಶದ ಮುಖವಾಡ ಕಳಚಿ ಬಿದ್ದಿದೆ.
ಪ್ರಸ್ತುತ, ದೇಶದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ ನಡೆಯುತ್ತಿದೆ. ದಿನದಿಂದ ದಿನಕ್ಕೆ ಭರ್ಜರಿ ಮನರಂಜನೆ ನೀಡುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಈಗಾಗಲೇ 13 ಪಂದ್ಯಗಳು ಪೂರ್ಣಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ 5 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ. ಉಳಿದ ತಂಡಗಳು ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮ ಪಡುತ್ತಿವೆ.
ಆರ್​ಸಿಬಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜನವರಿ 24ರಂದು ಗುಜರಾತಿನ ವಡೋದರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಇಡೀ ತಂಡ ವಡೋದರಾದಲ್ಲಿ ಬೀಡುಬಿಟ್ಟಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇದರ ನಡುವೆ ಆರ್​ಸಿಬಿ ಆಟಗಾರ್ತಿಯರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಊರು ಸುತ್ತಿದ ಆರ್​ಸಿಬಿ ಸ್ಟಾರ್ಸ್​
ಆರ್​ಸಿಬಿ ತಂಡದ ವಿದೇಶಿ ಆಟಗಾರ್ತಿಯರಾದ ಲಾರೆನ್​ ಬೆಲ್​, ನಾಡಿನ್​ ಡಿ ಕ್ಲರ್ಕ್​ ಮತ್ತು ಜಾರ್ಜಿಯಾ ವೊಲ್​ ಅವರು ವಡೋದರಾದಲ್ಲಿ ಬೀದಿ ಬೀದಿಯನ್ನು ಸುತ್ತಾಡಿದ್ದಾರೆ. ಅದು ಕೂಡ ಯಾವುದೇ ಭದ್ರತೆ ಇಲ್ಲದೆ. ಒಬ್ಬನೇ ಅಂಗರಕ್ಷಕ ಬಿಟ್ಟರೆ ಬೇರೆ ಯಾರೂ ಕೂಡ ಆಟಗಾರ್ತಿಯರ ಹತ್ತಿರವೂ ಇಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್​ ಆಗಿ, ಚರ್ಚೆ ಹುಟ್ಟುಹಾಕಿದೆ. ಕೆಲವರು ಆಟಗಾರ್ತಿಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಬಾಂಗ್ಲಾದೇಶದ ಕ್ರಿಕೆಟ್​ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಂಗ್ಲಾ ಮುಖವಾಡ ಬಯಲು

ಆರ್​ಸಿಬಿ ಆಟಗಾರ್ತಿಯರು ಯಾವುದೇ ಭದ್ರತೆ ಇಲ್ಲದೇ ವಡೋದರಾ ಬೀದಿಗಳಲ್ಲಿ ಆರಾಮಾಗಿ ಓಡಾಡಿದ್ದಾರೆ. ಆದರೆ, ಬಾಂಗ್ಲಾದೇಶದ ಕ್ರಿಕೆಟ್​ ಮಂಡಳಿ ಭಾರತದಲ್ಲಿ ತಮ್ಮ ಆಟಗಾರರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ, ಹಿಂದೂಗಳ ಮೇಲಿನ ದೌರ್ಜನ್ಯ ಬಾಂಗ್ಲಾದಲ್ಲಿ ನಿಂತಿಲ್ಲ. ಇದೇ ಕಾರಣಕ್ಕೆ ಬಾಂಗ್ಲಾ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಗಡೆ ಹಾಕಲಾಯಿತು. ಇದರಿಂದ ಹತಾಸೆಗೊಂಡಿರುವ ಬಾಂಗ್ಲಾದೇಶದ ಕ್ರಿಕೆಟ್​ ಮಂಡಳಿ, ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವುದಿಲ್ಲ ಎಂದು ಹೇಳುತ್ತಿದೆ.
ಭಾರತದಲ್ಲಿ ನಮಗೆ ಸೂಕ್ತ ಭದ್ರೆತ ಸಿಗುವುದಿಲ್ಲ ಎಂಬ ಚಿಂತೆ ಇದೆ. ಹೀಗಾಗಿ, ಟಿ20 ವಿಶ್ವಕಪ್​ ಪಂದ್ಯಗಳನ್ನು ನಾವು ಭಾರತದಲ್ಲಿ ಆಡುವುದಿಲ್ಲ. ನಮ್ಮ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡಿ ಎಂದು ಬಾಂಗ್ಲಾದೇಶ ಆಗ್ರಹಿಸಿದೆ. ಆದರೆ, ಬಾಂಗ್ಲಾ ಮಾತಿಗೆ ಐಸಿಸಿ ಮಣೆ ಹಾಕಿಲ್ಲ. ಆಡುವುದಾದರೆ, ಭಾರತದಲ್ಲೇ ಆಡಿ ಎಂದಿದೆ. ಈ ಬಗ್ಗೆ ಬಾಂಗ್ಲಾ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದರ ನಡುವೆ, ಆರ್​ಸಿಬಿಯ ವಿದೇಶಿ ಆಟಗಾರ್ತಿಯರು ಆರಾಮಾಗಿ ವಡೋದರಾ ರಸ್ತೆಯಲ್ಲಿ ಓಡಾಡುತ್ತಿರುವುದು ಭಾರತದಲ್ಲಿನ ಶಾಂತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಈ ವಿಡಿಯೋವನ್ನು ಮುಂದಿಟ್ಟುಕೊಂಡು ಬಾಂಗ್ಲಾ ಕ್ರಿಕೆಟ್​ ಮಂಡಳಿಯನ್ನು ಭಾರತೀಯ ತರಾಟೆಗೆ ತೆಗೆದುಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net