79 ರನ್​ಗೆ ಆಲೌಟ್​... 10 ವರ್ಷಗಳ ಹಿಂದಿನ ಹೀನಾಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾ ಭಾರತ? IND vs NZ

ಭಾರತ vs ನ್ಯೂಜಿಲೆಂಡ್
ಭಾರತ vs ನ್ಯೂಜಿಲೆಂಡ್
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭ
  • ಮೊದಲ ಟಿ20 ಪಂದ್ಯಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣ ಸಜ್ಜು
  • ಟೀಮ್​ ಇಂಡಿಯಾಗೆ ನಾಗ್ಪುರ ಕ್ರೀಡಾಂಗಣವೇ ಒಂದು ಸವಾಲಾಗಿ ಪರಿಣಮಿಸಿದೆ
  • 2016ರ ಟಿ20 ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ( IND vs NZ ) ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ (ಜನವರಿ 21) ಆರಂಭವಾಗಲಿದೆ. ಮೊದಲ ಟಿ20 ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈಗಾಗಲೇ ಏಕದಿನ ಸರಣಿಯನ್ನು ಸೋತು ಭಾರಿ ಮುಖಭಂಗ ಅನುಭವಿಸುತ್ತಿರುವ ಟೀಮ್​ ಇಂಡಿಯಾಗೆ ನಾಗ್ಪುರ ಕ್ರೀಡಾಂಗಣ ಒಂದು ಸವಾಲಾಗಿದೆ. ಏಕೆಂದರೆ, ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಒಂದು ಕಹಿ ಅನುಭವ ಇದೆ. ನಾಗ್ಪುರ ಕ್ರೀಡಾಂಗಣದಲ್ಲಿ ಟೀಮ್​ ಇಂಡಿಯಾ ಇಲ್ಲಿಯವರೆಗೆ ಐದು ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಮೂರು ಪಂದ್ಯಗಳನ್ನು ಗೆದ್ದು, ಎರಡು ಪಂದ್ಯಗಳನ್ನು ಸೋತಿದೆ. 2016ರ ಟಿ20 ವಿಶ್ವಕಪ್‌ನಲ್ಲಿ ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತು.
ಅಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಕಡಿಮೆ ಮೊತ್ತ ಆಗಿದ್ದರಿಂದ ಭಾರತ ಸುಲಭವಾಗಿ ಗುರಿ ಬೆನ್ನಟ್ಟುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಡೆದಿದ್ದೇ ಭೇರೆ. ಭಾರತ 18.1 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ಸರ್ವಪತನಗೊಂಡಿತು. ಕಿವೀಸ್ ಸ್ಪಿನ್ನರ್‌ಗಳಾದ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಭಾರಿ ಸಂಕಷ್ಟ ತಂದರು. ಸ್ಯಾಂಟ್ನರ್ ನಾಲ್ಕು ವಿಕೆಟ್ ಪಡೆದರೆ, ಇಶ್ ಸೋಧಿ ಮೂರು ವಿಕೆಟ್ ಕಬಳಿಸಿದರು.
ಪ್ರಸ್ತುತ ಕಿವೀಸ್ ತಂಡದಲ್ಲಿ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಕೂಡ ಇದ್ದಾರೆ. ಅವರೊಂದಿಗೆ ಗ್ಲೆನ್ ಫಿಲಿಪ್ಸ್ ಮತ್ತು ರಾಚಿನ್ ರವೀಂದ್ರ ಅರೆಕಾಲಿಕ ಸ್ಪಿನ್ನರ್​ಗಳಾಗಿ ಆಡಬಹುದು. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದ ಯಶಸ್ಸಿನ ಸಾಧ್ಯತೆಗಳು ಭಾರತೀಯ ಬ್ಯಾಟ್ಸ್‌ಮನ್‌ಗಳು, ಕಿವೀಸ್ ಸ್ಪಿನ್ನರ್‌ಗಳನ್ನು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಅಂದಹಾಗೆ, ನಾಗ್ಪುರ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳನ್ನು ಬೆಂಬಲಿಸುತ್ತದೆ. ಪಂದ್ಯದ ಸಮಯದಲ್ಲಿ ಹಿಮದ ಪ್ರಭಾವದಿಂದಾಗಿ, ಬೌಲರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಈ ಕ್ರಮದಲ್ಲಿ, ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಇಂದಿನ ಪಂದ್ಯದಲ್ಲಿ ಟಾಸ್​ ಕೂಡ ನಿರ್ಣಾಯಕವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net