50* ಶತಕ, 500 ಪಂದ್ಯ... ರೋಹಿತ್ ಹೆಸರಿಗೆ ಈ 8 ದಾಖಲೆಗಳು! ಏಕದಿನ ಸರಣಿಗೆ 'ಹಿಟ್​ಮ್ಯಾನ್'​ ಸನ್ನದ್ಧ | Rohit Sharma

ವಿಜಯವಾಣಿ (61)
Published on

Rohit Sharma: ಇದೇ ಅ.19ರಿಂದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿರುವ ಟೀಮ್ ಇಂಡಿಯಾ, ನಾಯಕ ಶುಭಮನ್ ಗಿಲ್​ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಈ ಸರಣಿ ಮೂಲಕ ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವ ಮಾಜಿ ಕ್ಯಾಪ್ಟನ್ ರೋಹಿತ್​ ಶರ್ಮ, ಕಾಂಗರೂ ನೆಲದಲ್ಲಿ ತಮ್ಮ ದಾಖಲೆಗಳನ್ನು ವಿಸ್ತರಿಸಲು ಎದುರುನೋಡುತ್ತಿದ್ದಾರೆ. ಅಸಲಿಗೆ ರೋಹಿತ್ ಹೆಸರಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ ಒಟ್ಟು 8 ದಾಖಲೆಗಳಿವೆ.

ಯಾವುದು ಆ ದಾಖಲೆಗಳು?

Rohit Sharma

1. 500* ಅಂತರರಾಷ್ಟ್ರೀಯ ಪಂದ್ಯಗಳು

2007ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್, ಇಲ್ಲಿಯವರೆಗೆ 67 ಟೆಸ್ಟ್, 273 ಏಕದಿನ ಮತ್ತು 159 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆಯಾಗಿ, ಹಿಟ್‌ಮ್ಯಾನ್ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾ ಪರ 499 ಮ್ಯಾಚ್​ಗಳನ್ನು ಆಡಿದ್ದಾರೆ. ಇನ್ನು ಭಾನುವಾರ ಪರ್ತ್‌ನಲ್ಲಿ ನಡೆಯಲಿರುವ ಆಸೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯವು ರೋಹಿತ್ ಅವರ ವೃತ್ತಿಜೀವನದ ಪ್ರಮುಖ ಪಂದ್ಯವಾಗಲಿದೆ.

2. 50* ಅಂತರರಾಷ್ಟ್ರೀಯ ಶತಕಗಳು..

67 ಟೆಸ್ಟ್‌ಗಳಲ್ಲಿ 12, 273 ಏಕದಿನ ಪಂದ್ಯಗಳಲ್ಲಿ 32 ಮತ್ತು 159 ಟಿ20 ಪಂದ್ಯಗಳಲ್ಲಿ 5 ಶತಕಗಳನ್ನು ಹಿಟ್​ಮ್ಯಾನ್​ ದಾಖಲಿಸಿದ್ದಾರೆ. ರೋಹಿತ್ ಶರ್ಮಾ ಒಟ್ಟು 499 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 49 ಶತಕಗಳನ್ನು ಗಳಿಸಿದ್ದಾರೆ. ಆಸೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರು ಒಂದೇ ಒಂದು ಸೆಂಚುರಿ ಬಾರಿಸಿದರೂ, ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳ ಮೈಲಿಗಲ್ಲನ್ನು ತಲುಪಲಿದ್ದಾರೆ.

3. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌

ಇದುವರೆಗೆ 273 ಏಕದಿನ ಪಂದ್ಯಗಳನ್ನಾಡಿರುವ ಅವರು, 265 ಇನ್ನಿಂಗ್ಸ್‌ಗಳಲ್ಲಿ 344 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆಸೀಸ್ ವಿರುದ್ಧದ ಸರಣಿಯಲ್ಲಿ ರೋಹಿತ್​, ಇನ್ನೂ 8 ಸಿಕ್ಸರ್‌ಗಳನ್ನು ಬಾರಿಸಿದರೆ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರನಾಗಿ ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಪ್ರಸ್ತುತ, ಈ ದಾಖಲೆ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

4. ಇನ್ನೂ 30 ರನ್‌ ಬಾರಿಸಿದರೆ....

ತಮ್ಮದೇ ಆದ ಶೈಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರೋಹಿತ್ ಶರ್ಮ, ಭಾರತಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಮಧ್ಯೆ, ಭಾರತ ಇಲ್ಲಿಯವರೆಗೆ ಗೆದ್ದ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 7,970 ರನ್‌ಗಳನ್ನು ಗಳಿಸಿದ್ದಾರೆ. ಈ ಅನುಕ್ರಮದಲ್ಲಿ, ಮುಂಬರುವ ಆಸೀಸ್ ಸರಣಿಯಲ್ಲಿ ಭಾರತ ಗೆಲ್ಲುವ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನೂ 30 ರನ್ ಗಳಿಸಿದರೆ, ಅವರು 8000 ರನ್​ ಮೈಲಿಗಲ್ಲು ತಲುಪುತ್ತಾರೆ.

5. ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 1000 ರನ್‌ ದಾಖಲೆ

2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ ಹಿಟ್​ಮ್ಯಾನ್​, ಅಂದಿನಿಂದ, ಆಸೀಸ್​ ಎದುರು 18 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಅವರು 990 ರನ್‌ಗಳನ್ನು ಗಳಿಸಿದ್ದಾರೆ. 1000ಕ್ಕೆ ಇನ್ನೂ 10 ರನ್‌ಗಳಷ್ಟೇ ಬಾಕಿಯಿದ್ದು, ಏಕದಿನ ಸರಣಿಯಲ್ಲಿ ಆ ರನ್​ ಗಳಿಸಿದರೆ, ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 1000 ರನ್‌ ಗಳಿಸಿದ ಮೊದಲ ಭಾರತೀಯ ಆಟಗಾರರಾಗಿ ಹೊರಹೊಮ್ಮಲಿದ್ದಾರೆ. ಈ ಮೂಲಕ ಮತ್ತೊಂದು ಇತಿಹಾಸಕ ಸೃಷ್ಟಿಸಲಿದ್ದಾರೆ.

6. ಆರಂಭಿಕ ಆಟಗಾರನಾಗಿ ಅತಿಹೆಚ್ಚು ರನ್‌ಗಳು

ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವೀರೇಂದ್ರ ಸೆಹ್ವಾಗ್ ಅವರ ಹೆಸರಿನಲ್ಲಿದೆ. ಸೆಹ್ವಾಗ್ 321 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 15,758 ರನ್‌ಗಳನ್ನು ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದು, 348 ಪಂದ್ಯಗಳಲ್ಲಿ 15,584 ರನ್‌ಗಳನ್ನು ಗಳಿಸಿದ್ದಾರೆ. ಆಸೀಸ್ ವಿರುದ್ಧದ ಸರಣಿಯಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿರುವ ರೋಹಿತ್, 174 ರನ್ ಗಳಿಸಿದರೆ ವೀರೂ ದಾಖಲೆಯನ್ನು ಮುರಿದು ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.

Rohit Sharma

7. ಆಸೀಸ್ ವಿರುದ್ಧ 10 ಶತಕಗಳು

2007ರಿಂದ ರೋಹಿತ್ ಶರ್ಮಾ ಎಲ್ಲಾ ಫಾರ್ಮೆಟ್​ನಲ್ಲಿಯೂ ಆಸೀಸ್ ವಿರುದ್ಧ 84 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 9 ಶತಕಗಳನ್ನು ಗಳಿಸಿದ್ದಾರೆ. ಈ ಸರಣಿಯಲ್ಲಿ ಏನಾದರೂ ರೋಹಿತ್ ಶತಕ ಬಾರಿಸಿದರೆ, ಹಿಟ್‌ಮ್ಯಾನ್ ಆಸೀಸ್ ವಿರುದ್ಧ 10 ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಆರಂಭಿಕ ಬ್ಯಾಟರ್​ ಎಂಬ ಪಟ್ಟವನ್ನು ಅಲಂಕರಿಸಲಿದ್ದಾರೆ.

8. ಗಂಗೂಲಿ ದಾಖಲೆ ಬ್ರೇಕ್

ಇಲ್ಲಿಯವರೆಗೆ 273 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 265 ಇನ್ನಿಂಗ್ಸ್‌ಗಳಲ್ಲಿ 48.8 ಸರಾಸರಿಯಲ್ಲಿ 11,168 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಇನ್ನೂ 54 ರನ್ ಗಳಿಸಿದರೆ, ಹಿಟ್‌ಮ್ಯಾನ್ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪುತ್ತಾರೆ. ಈ ಅನುಕ್ರಮದಲ್ಲಿ ಅವರು ಸೌರವ್ ಗಂಗೂಲಿ (11,221) ಅವರನ್ನು ಹಿಂದಿಕ್ಕಲಿದ್ದಾರೆ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net