

ನವದೆಹಲಿ: ಕ್ರಿಕೆಟ್ ಎಂಬ ಆಟದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಯಾರು ಸಹ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಗೆಲ್ಲುತ್ತದೆ ಎಂದುಕೊಂಡಿರುವ ತಂಡ ದಿಢೀರನೆ ಸೋಲುತ್ತದೆ. ಅದೇ ರೀತಿ ಸೋಲಿನ ಸುಳಿಯಲ್ಲಿ ಸಿಲುಕಿರುವ ತಂಡವು ಅಂತಿಮ ಕ್ಷಣದವರೆಗೂ ಹೋರಾಡಿ ಗೆಲುವಿನ ನಗೆಯನ್ನು ಬೀರುತ್ತದೆ. ಈ ರೀತಿಯ ಘಟನೆಗಳು ಸಂಭವಿಸುವುದು ಅಪರೂಪ.
ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವಿನ ಕಾದಾಟ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದೀಗ ಅದೇ ರೀತಿಯ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದ ಮೂರನೇ ಡಿವಿಷನ್ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬೌಲರ್ 6 ಎಸೆತಗಳಲ್ಲಿ 6 ವಿಕೆಟ್ ಪಡೆದಿರುವುದು ಬೆಳಕಿಗೆ ಬಂದಿದೆ.
ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ಮತ್ತು ಸರ್ಫರ್ಸ್ ಪ್ಯಾರಡೈಸ್ ನಡುವೆ ಈ ಪಂದ್ಯ ನಡೆದಿದೆ. ಇದರಲ್ಲಿ ಸರ್ಫರ್ಸ್ ಪ್ಯಾರಡೈಸ್ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ ಕೇವಲ ಐದು ರನ್‌ಗಳ ಅವಶ್ಯಕತೆಯಿತ್ತು. 4 ವಿಕೆಟ್ ಕಳೆದುಕೊಂಡಿತ್ತಷ್ಟೆ. ಈ ತಂಡವು ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತದೆ ಎಂದು ನಂಬಲಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಮುಗೀರಬ ನೆರಂಗ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ನಾಯಕ ಗರೆತ್ ಮಾರ್ಗನ್ ಕೊನೆಯ ಓವರ್ ಬೌಲ್ ಮಾಡಿದರು. ಇವರು ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಆ ಬಳಿಕ ಎರಡನೇ ಎಸೆತ ಹಾಗೂ ಮೂರನೇ ಎಸೆತದಲ್ಲೂ ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡಿದರು. ಪಂದ್ಯ ಮುಂದೆ ಸಾಗಿದಂತೆ ರೋಚಕತೆ ಸೃಷ್ಟಿಸಿತು. ಸರ್ಫರ್ಸ್ ಪ್ಯಾರಡೈಸ್ ಗೆಲುವಿಗೆ ಇನ್ನೂ 3 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ನಂತರ ಮಾರ್ಗನ್ ಮುಂದಿನ ಮೂರು ಎಸೆತಗಳಲ್ಲೂ ಮೂರು ವಿಕೆಟ್ ಪಡೆದರು. ಈ ಮೂಲಕ 6 ಎಸೆತಗಳಲ್ಲಿ 6 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಗರೆಥ್ ಮಾರ್ಗನ್ ಎಸೆದ ಕೊನೆಯ ಓವರ್ ಮೊದಲ ನಾಲ್ಕು ಎಸೆತಗಳಲ್ಲಿ ಬ್ಯಾಟರ್ ಕ್ಯಾಚ್ ನೀಡಿ ನಿರ್ಗಮಿಸಿದರೆ, ಕೊನೆಯ ಇಬ್ಬರು ಬ್ಯಾಟ್ಸ್‌ಮನ್‌ಗಳು ಬೌಲ್ಡ್ ಆದರು. ಈ ಪಂದ್ಯದಲ್ಲಿ ಮಾರ್ಗನ್ 7 ಓವರ್ಗಳಲ್ಲಿ 16 ರನ್ ನೀಡಿ 7 ವಿಕೆಟ್ ಪಡೆದಿದ್ದಾರೆ. ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದದ್ದು ಇದೇ ಮೊದಲು. ವೃತ್ತಿಪರ ಕ್ರಿಕೆಟ್‌ನಲ್ಲಿ, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, ಬಾಂಗ್ಲಾದೇಶದ ಅಲ್ ಅಮೀನ್ ಹುಸೇನ್ ಮತ್ತು ಭಾರತದ ಅಭಿಮನ್ಯು ಮಿಥುನ್ ಅವರು ಓವರಿನಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.