ಕೇವಲ 9 ತಿಂಗಳಲ್ಲಿ ರೂ. 5 ಕೋಟಿ ಹೂಡಿಕೆ ಮಾಡಿ ರೂ. 31.5 ಕೋಟಿ ಗಳಿಕೆ: ಸಚಿನ್​ ತೆಂಡೂಲ್ಕರ್​ ಯಾವ ಕಂಪನಿ ಷೇರುಗಳಲ್ಲಿ ಹಣ ತೊಡಗಿಸಿದ್ದರು ಗೊತ್ತೆ?

sachin web
Published on

ಮುಂಬೈ: ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಬ್ಯಾಟ್​ ಬೀಸಿದರೆ ರನ್​ಗಳ ಸುರಿಮಳೆಯಾಗುವುದು ಸರ್ವವೇದ್ಯ. ಈ ರನ್​ ಮಶೀನ್​ ಈಗ ಷೇರು ಮಾರುಕಟ್ಟೆಯಲ್ಲಿ ಮಾಡಿದ ಹೂಡಿಕೆ ಕೂಡ ಲಾಭದ ಬೃಹತ್​ ಪ್ರವಾಹವನ್ನೇ ಹರಿಸಿದೆ. ತಮ್ಮ ಹೂಡಿಕೆ ಮೂಲಕ ಕೇವಲ 9 ತಿಂಗಳಲ್ಲಿ ಶೇಕಡಾ 531ರಷ್ಟು ಲಾಭ ಗಳಿಸುವ ಮೂಲಕ ತೆಂಡೂಲ್ಕರ್​ ಅಚ್ಚರಿ ಮೂಡಿಸಿದ್ದಾರೆ.

ಹಾಗಿದ್ದರೆ ಅವರು ಹೂಡಿಕೆ ಮಾಡಿದ್ದೆಷ್ಟು? ಯಾವ ಷೇರುಗಳನ್ನು ಅವರು ಖರೀದಿಸಿದ್ದಾರೆ? ಎಂಬುದರತ್ತ ಕುತೂಹಲಕಾರಿ ನೋಟ ಇಲ್ಲಿದೆ.

ಒಂಬತ್ತು ತಿಂಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರು 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಹೈದರಾಬಾದ್ ಮೂಲದ ಆಜಾದ್ ಇಂಜಿನಿಯರಿಂಗ್ ಷೇರುಗಳಲ್ಲಿ ಅವರು ಈ ಹಣ ತೊಡಗಿಸಿದ್ದರು.

ತೆಂಡೂಲ್ಕರ್ ಅವರು ಕಳೆದ ಮಾರ್ಚ್‌ನಲ್ಲಿ ಆಜಾದ್ ಇಂಜಿನಿಯರಿಂಗ್‌ನಲ್ಲಿ ಅಂದಾಜು 5 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಯನ್ನು ಸ್ವಾಧೀನಪಡಿಸಿಕೊಂಡರು. ಇಂಧನ, ಬಾಹ್ಯಾಕಾಶ, ರಕ್ಷಣೆ, ತೈಲ ಮತ್ತು ಅನಿಲ ವಲಯಗಳಲ್ಲಿ ಮೂಲ ಸಾಧನಗಳ ತಯಾರಿಕೆಯಲ್ಲಿ ಈ ಸಂಸ್ಥೆ ಪರಿಣತಿ ಹೊಂದಿದೆ.

ಸಚಿನ್ ತೆಂಡೂಲ್ಕರ್ ಅವರ ಈ ಹೂಡಿಕೆಯು ಈಗ 26.5 ಕೋಟಿ ರೂಪಾಯಿಗಳಿಗೆ ಈಗ ಏರಿಕೆ ಕಂಡಿದೆ. ಮಿಚೆಲ್ ಸ್ಟಾರ್ಕ್ ಅವರು ಇತ್ತೀಚಿನ ದಾಖಲೆಯ ಐಪಿಎಲ್ ಡೀಲ್​ನಲ್ಲಿ ಗಳಿಸಿದ 24.75 ಕೋಟಿ ರೂಪಾಯಿಗಿಂತಲೂ ಇದು ಅಧಿಕವಾಗಿದೆ. ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.

ಆಜಾದ್ ಇಂಜಿನಿಯರಿಂಗ್‌ ಸಂಸ್ಥೆಯು ಐಪಿಒ ಬಿಡುಗಡೆ ಮಾಡುವ ಮೊದಲು, ಸ್ಟಾಕ್ ವಿಭಜನೆ ಮತ್ತು ಬೋನಸ್ ವಿತರಣೆಯ ನಂತರ, ತೆಂಡೂಲ್ಕರ್ ಅವರು ಪ್ರತಿ ಷೇರಿಗೆ ರೂ 114.1 ರ ಸರಾಸರಿ ಸ್ವಾಧೀನ ವೆಚ್ಚದಲ್ಲಿ 4,38,210 ಷೇರುಗಳನ್ನು ಪಡೆದಿದ್ದರು. ಈ ಸಂಸ್ಥೆಯು ಐಪಿಒ ಬಿಡುಗಡೆ ಮಾಡಿದರೂ ತೆಂಡೂಲ್ಕರ್​ ತಮ್ಮ ಪಾಲನ್ನು ಹಿಂತೆಗೆದುಕೊಳ್ಳದೆ ಇರುವುದು ಜಾಣತನದ ನಡೆಯಾಯಿತು. 740 ಕೋಟಿ ರೂಪಾಯಿ ಮೊತ್ತದ ಈ ಐಪಿಒ, ಎನ್ಎಸ್ಇಯಲ್ಲಿ 720 ರೂಪಾಯಿಯಲ್ಲಿ ಪ್ರಾರಂಭವಾಯಿತು, 524 ರೂಪಾಯಿ ಇಶ್ಯೂ ಬೆಲೆಗಿಂತ 37.4% ಪ್ರೀಮಿಯಂ ಬೆಲೆ ಪಡೆಯಿತು. ಈ ಹಿನ್ನೆಲೆಯಲ್ಲಿ ತೆಂಡೂಲ್ಕರ್​ ಅವರ ಆರಂಭಿಕ 5 ಕೋಟಿ ರೂಪಾಯಿ ಹೂಡಿಕೆಯ ಮೌಲ್ಯವು ಈಗ ರೂ 31.5 ಕೋಟಿ ರೂಪಾಯಿಗೆ ಏರಿದೆ.

ಈ ಸಂಸ್ಥೆಯ ಐಪಿಒ ಯಶಸ್ಸು ತೆಂಡೂಲ್ಕರ್‌ ಅವರನ್ನು ಶ್ರೀಮಂತರನ್ನಾಗಿ ಮಾಡಿದ್ದು ಮಾತ್ರವಲ್ಲದೆ, ತಲಾ 1 ಕೋಟಿ ರೂಪಾಯಿ ಹೂಡಿಕೆ ಮಾಡಿದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ವಿವಿಎಸ್ ಲಕ್ಷ್ಮಣ್, ತೆಂಡೂಲ್ಕರ್ ಅವರಿಗೂ ಲಾಭ ಮಾಡಿಕೊಟ್ಟಿದೆ. ಆದರೆ, ಇವರೆಲ್ಲರೂ ತೆಂಡೂಲ್ಕರ್​ಗಿಂತ ದುಪ್ಪಟ್ಟು ಬೆಲೆಗೆ ಷೇರುಗಳನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇವರು ಪ್ರತಿ ಷೇರಿಗೆ 228.17 ರೂಪಾಯಿ ಬೆಲೆ ನೀಡಿದ್ದು, ಈಗ ಶೇಕಡಾ 215% ಲಾಭ ಮಾಡಿಕೊಂಡಿದ್ದಾರೆ. ಅವರ ಒಂದು ಕೋಟಿ ರೂಪಾಯಿ ಹೂಡಿಕೆಯು 3.15 ಕೋಟಿ ರೂಪಾಯಿಗೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net