

ಜೊಹಾನ್ಸ್ಬರ್ಗ್: ಸೆಂಚುರಿಯನ್ನಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಿರುವ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ. 4ನೇ ಹಾಗೂ ಅಂತಿಮ ಟಿ20 ಪಂದ್ಯ ಶುಕ್ರವಾರ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸದ್ಯ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಸೂರ್ಯಕುಮಾರ್ ಯಾದವ್ ಪಡೆ ಮತ್ತೊಂದು ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಏಡನ್ ಮಾರ್ಕ್ರಮ್ ಪಡೆ ಗೆದ್ದರೂ ಸರಣಿ ಸಮಬಲ ಸಾಧಿಸುವ ಅವಕಾಶವನ್ನಷ್ಟೇ ಹೊಂದಿದೆ. ಇದು ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೆ ಮರಳಿರುವ ವರ್ಷದಲ್ಲಿ ಆಡುತ್ತಿರುವ ಕೊನೇ ಚುಟುಕು ಕ್ರಿಕೆಟ್ ಪಂದ್ಯವಾಗಿರಲಿದೆ.
ಭಾರತ ತಂಡದ ಪ್ರಮುಖ ಆಟಗಾರರು ಆಸ್ಟ್ರೆಲಿಯಾದಲ್ಲಿರುವ ನಡುವೆ, ವಿವಿಎಸ್ ಲಕ್ಷ್ಮಣ್ ಹಂಗಾಮಿ ಮಾರ್ಗದರ್ಶನದಲ್ಲಿ ಯುವ ಆಟಗಾರರ ತಂಡ ಹರಿಣಗಳ ನಾಡಿನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದೆ. ಸಂಜು ಸ್ಯಾಮ್ಸನ್, ತಿಲಕ್ ವರ್ಮ ಶತಕದಾಟ ಆಡಿದ್ದರೆ, ಅಭಿಷೇಕ್ ಶರ್ಮ ಕಳೆದ ಪಂದ್ಯದಲ್ಲಿ ಲಯಕ್ಕೆ ಮರಳಿದ್ದಾರೆ. ಸ್ಪಿನ್ನರ್ಗಳ ಜತೆಗೆ ವೇಗಿ ಅರ್ಷದೀಪ್ ಸಿಂಗ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದರೆ, ಹಾರ್ದಿಕ್ ಪಾಂಡ್ಯ ಉಪಯುಕ್ತ ಆಟವನ್ನೇ ಆಡುತ್ತಿದ್ದಾರೆ.
ರಿಂಕು ಫಾರ್ಮ್ ಚಿಂತೆ
ಭಾರತದ ಪ್ರಮುಖ ಬ್ಯಾಟರ್ಗಳು ರನ್ ಗಳಿಸುತ್ತಿರುವ ನಡುವೆ ರಿಂಕು ಸಿಂಗ್ ರನ್ಬರ ಚಿಂತೆಯ ವಿಷಯವಾಗಿದೆ. ಸರಣಿಯ ಮೊದಲ 3 ಪಂದ್ಯಗಳಲ್ಲಿ ರಿಂಕು 11, 9, 8 ರನ್ಗಳನ್ನಷ್ಟೇ ಗಳಿಸಿದ್ದಾರೆ. 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕೂಡ ಅವರಿಗೆ ಹಿನ್ನಡೆಯಾಗಿದೆ. ಕೆಕೆಆರ್ನಲ್ಲಿ ಫಿನಿಷರ್ ಆಗಿ ಮಿಂಚಿರುವ ರಿಂಕು, ಭಾರತ ತಂಡ ಈ ಬಾರಿ ಚೇಸಿಂಗ್ ಅವಕಾಶ ಪಡೆದರೆ ನೆರವಿಗೆ ಬರುವ ನಿರೀಕ್ಷೆ ಇದೆ. ಮೊದಲ ಪಂದ್ಯದ ಶತಕವೀರ ಸಂಜು ಸ್ಯಾಮ್ಸನ್ ಕಳೆದೆರಡು ಪಂದ್ಯಗಳಲ್ಲಿ ಖಾತೆಯನ್ನೇ ತೆರೆಯದೆ ಮಾಕೋರ್ ಜಾನ್ಸೆನ್ಗೆ ವಿಕೆಟ್ ಒಪ್ಪಿಸಿರುವುದು ಕಳವಳಕಾರಿ ಎನಿಸಿದೆ.
ಟೀಮ್ ನ್ಯೂಸ್:
ಭಾರತ: ಮೊದಲ 3 ಪಂದ್ಯಗಳಲ್ಲಿ 15ರ ಪೈಕಿ 12 ಆಟಗಾರರನ್ನಷ್ಟೇ ಬಳಸಿಕೊಂಡಿರುವ ಭಾರತ, ಕೊನೇ ಪಂದ್ಯದಲ್ಲಾದರೂ ಮೀಸಲು ಆಟಗಾರರಿಗೆ ಅವಕಾಶ ಕೊಡುವುದೇ ಎಂಬ ಕುತೂಹಲವಿದೆ. ವೇಗಿಗಳಾದ ಯಶ್ ದಯಾಳ್ ಮತ್ತು ಕನ್ನಡಿಗ ವೈಶಾಕ್ ವಿಜಯ್ಕುಮಾರ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಭಾರತ ಗೆಲುವಿನ ಕಾಂಬಿನೇಷನ್ ಉಳಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.
ದ. ಆಫ್ರಿಕಾ: ಆರಂಭಿಕರ ಅಸ್ಥಿರ ನಿರ್ವಹಣೆಯೇ ದ. ಆಫ್ರಿಕಾಕ್ಕೆ ಹಿನ್ನಡೆ ಎನಿಸಿದೆ. ಜತೆಗೆ ಬೌಲಿಂಗ್ ವಿಭಾಗದಲ್ಲೂ ಸಮರ್ಥ ಕಾಂಬಿನೇಷನ್ ಕಂಡುಕೊಳ್ಳಲು ದ. ಆಫ್ರಿಕಾ ಪರದಾಡುತ್ತಿದೆ. ಕಳೆದ ಪಂದ್ಯದಲ್ಲಿ ದುಬಾರಿಯಾದ ವೇಗಿ ಗೆರಾಲ್ಡ್ ಕೋಟ್ಜೀ ಬದಲಿಗೆ ಸ್ಥಳಿಯ ಆಟಗಾರನಾಗಿರುವ ಲೆಗ್ ಸ್ಪಿನ್ನರ್ ಎನ್ಕಬಯೊಮ್ಜಿ ಪೀಟರ್ ಮರಳಬಹುದು.
ಆರಂಭ: ರಾತ್ರಿ 8.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ಮಳೆ ಭೀತಿ
ಜೊಹಾನ್ಸ್ರ್ಬಗ್ನಲ್ಲಿ ಟಾಸ್ಗೆ ಅರ್ಧ ಗಂಟೆ ಮುನ್ನ ಮಳೆ ಭೀತಿ ಇದೆ. ಇದರಿಂದ ಪಂದ್ಯ ಸ್ವಲ್ಪ ತಡವಾಗಿ ಆರಂಭವಾಗಬಹುದು.
ಮೂರನೇ ಕ್ರಮಾಂಕಕ್ಕೆ ಬಡ್ತಿ ಕೇಳಿ ಪಡೆದು ಮಿಂಚಿದ ತಿಲಕ್!
ಮೂರನೇ ಪಂದ್ಯದಲ್ಲಿ ತಿಲಕ್ ವರ್ಮ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಚೊಚ್ಚಲ ಶತಕ ಸಿಡಿಸುವ ಮೂಲಕ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ತಿಲಕ್ಗೆ ಬಡ್ತಿ ನೀಡುವುದು ನಾಯಕ ಸೂರ್ಯಕುಮಾರ್ ಅಥವಾ ಕೋಚ್ ವಿವಿಎಸ್ ಲಕ್ಷ್ಮಣ್ ಯೋಜನೆ ಆಗಿರಲಿಲ್ಲ. ಸ್ವತ@ ತಿಲಕ್ ಆಸೆಪಟ್ಟಂತೆ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಮೂಲಕ ಸೂರ್ಯಕುಮಾರ್ ಯಶ ಕಂಡಿದ್ದಾರೆ. ಶಿವಂ ದುಬೆ ಗಾಯಗೊಂಡ ಕಾರಣ ಪ್ರವಾಸಕ್ಕೆ ಮುನ್ನ ಕೊನೇಕ್ಷಣದಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದ ತಿಲಕ್, ಮೊದಲ 2 ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಆಡಿ ಹೆಚ್ಚಿನ ಕೊಡುಗೆ ನೀಡಿರಲಿಲ್ಲ. "ತಿಲಕ್ ನನ್ನ ಹೋಟೆಲ್ ಕೊಠಡಿಗೆ ಬಂದು 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ಹೀಗಾಗಿ ನಿನ್ನ ಆಸೆಯಂತೆ ನಿನ್ನ ಆಟವಾಡು ಎಂದು 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದೆ' ಎಂದು ಸೂರ್ಯಕುಮಾರ್ 3ನೇ ಪಂದ್ಯದ 11 ರನ್ ಗೆಲುವಿನ ಬಳಿಕ ನುಡಿದರು.
ಭಾರತಕ್ಕೆ ಸ್ಮರಣೀಯ ತಾಣ
ಜೊಹಾನ್ಸ್ರ್ಬಗ್ನ ವಾಂಡರರ್ಸ್ ಕ್ರೀಡಾಂಗಣ ಭಾರತದ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾದ ತಾಣವೆನಿಸಿದೆ. ಭಾರತ 2006ರ ಡಿಸೆಂಬರ್ 1ರಂದು ಇಲ್ಲೇ ತನ್ನ ಮೊಟ್ಟಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿತ್ತು. 2007ರ ಸೆಪ್ಟೆಂಬರ್ 24ರಂದು ಪಾಕಿಸ್ತಾನವನ್ನು ಕೇವಲ 5 ರನ್ಗಳಿಂದ ಸೋಲಿಸಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿದ ತಾಣವೂ ಇದೇ ಆಗಿದೆ. ಕಳೆದ ವರ್ಷ ಇಲ್ಲಿ ಆಡಿದ ಪಂದ್ಯದಲ್ಲೇ ಸೂರ್ಯಕುಮಾರ್ ತನ್ನ 4ನೇ ಟಿ20 ಶತಕವನ್ನೂ ಸಿಡಿಸಿದ್ದರು. ಜೊಹಾನ್ಸ್ರ್ಬಗ್ನಲ್ಲಿ ಇದುವರೆಗೆ ಆಡಿದ 6 ಟಿ20 ಪಂದ್ಯಗಳಲ್ಲಿ ಭಾರತ 4ರಲ್ಲಿ ಗೆದ್ದು, 2ರಲ್ಲಿ ಸೋತಿದೆ. ಈ ಪೈಕಿ 3 ಗೆಲುವು ಆತಿಥೇಯ ದಣ ಆಫ್ರಿಕಾ ವಿರುದ್ಧವೇ ದಾಖಲಾಗಿದೆ.
ಹ್ಯಾಟ್ರಿಕ್ ಸರಣಿ ಗುರಿ
ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್ ತಂಡಕ್ಕೆ ಸೂರ್ಯಕುಮಾರ್ ಯಾವದ್ ಪೂರ್ಣಪ್ರಮಾಣದ ನಾಯಕರಾಗಿ ನೇಮಕಗೊಂಡ ನಂತರದಲ್ಲಿ ಭಾರತ ಆಡುತ್ತಿರುವ 3ನೇ ಸರಣಿ ಇದಾಗಿದೆ. ಈ ಮುನ್ನ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಸರಣಿಗಳಲ್ಲಿ 3-0ಯಿಂದ ಗೆದ್ದಿರುವ ಭಾರತ ಮತ್ತೊಂದು ಸರಣಿ ಜಯದೊಂದಿಗೆ ಹ್ಯಾಟ್ರಿಕ್ ಸಾಧಿಸುವ ಅವಕಾಶ ಹೊಂದಿದೆ.