ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡರೆ 4 ವರ್ಷ ನಿಷೇಧ!

Doping 6 June 20
Published on

ನವದೆಹಲಿ: ಕರೊನಾ ವೈರಸ್ ಹಾವಳಿಯ ನೆಪನೀಡಿ ಉದ್ದೀಪನ ಪರೀಕ್ಷೆಗೆ ಸ್ಯಾಂಪಲ್ ನೀಡುವುದನ್ನು ತಪ್ಪಿಸಿಕೊಳ್ಳುವ ಕ್ರೀಡಾಪಟುವಿಗೆ 4 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ರಾಷ್ಟ್ರೀಯ ಉದ್ದೀಪ ನಿಗ್ರಹ ಘಟಕ (ನಾಡಾ) ಹೊಸ ನಿಯಮ ಜಾರಿಗೆ ತಂದಿದೆ.

ಉದ್ದೀಪನ ಪರೀಕ್ಷೆಗೆ ಆಗಮಿಸುವ ಡೋಪ್ ಕಂಟ್ರೋಲ್ ಅಧಿಕಾರಿಗಳಿಗೆ (ಡಿಸಿಒ) ಸ್ಯಾಂಪಲ್ ನೀಡುವ ವೇಳೆ ಕ್ರೀಡಾಪಟು ಮಾಸ್ಕ್ ಧರಿಸದಿದ್ದರೆ, ಸ್ಯಾನಿಟೈಸರ್ ಬಳಸದಿದ್ದರೆ ಮತ್ತು ಗ್ಲೌಸ್ ಧರಿಸಲು ನಿರಾಕರಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು. ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಶಿಬಿರಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ನಾಡಾ, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಸಂಭಾವ್ಯ ಕ್ರೀಡಾಪಟುಗಳ ಉದ್ದೀಪನ ಪರೀಕ್ಷೆ ಸಜ್ಜಾಗಿದ್ದು, ಅದಕ್ಕೆ ಮುನ್ನ ಕೆಲವು ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ನಾಡಾದ ಉದ್ದೀಪನ ಪರೀಕ್ಷೆಗಳ ಪುನರಾರಂಭದಲ್ಲಿ ಮೊದಲಿಗೆ ಟೋಕಿಯೊ ಒಲಿಂಪಿಕ್ಸ್ ಸಂಭಾವ್ಯರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಪಟ್ಟಿಯಲ್ಲಿ 110 ಕ್ರೀಡಾಪಟುಗಳಿದ್ದಾರೆ. ಅಥ್ಲೀಟ್​ಗಳು ಮತ್ತು ವೇಟ್​ಲಿಫ್ಟರ್​ಗಳನ್ನು ಪಟಿಯಾಲಾದ ಎನ್​ಐಎಸ್​ನಲ್ಲಿ ಪರೀಕ್ಷೆಗೆ ಒಳಪಡಿಸ ಲಾಗುವುದು. ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಹಾಕಿ ತಂಡದ ಉದ್ದೀಪನ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮೇ 27ರಂದು ಮೃತಪಟ್ಟಿದ್ದ ವೃದ್ಧೆಯಲ್ಲಿ ಕೊವಿಡ್​-19 ಪಾಸಿಟಿವ್​ ದೃಢ…

ಉದ್ದೀಪನ ಪರೀಕ್ಷೆಯ ಭಾಗವಾಗಿ ಈಗ ಕ್ರೀಡಾಪಟುಗಳ ರಕ್ತದ ಮಾದರಿಯನ್ನು ಪಡೆದುಕೊಳ್ಳಲಾಗುವುದಿಲ್ಲ. ಅದನ್ನು 36 ಗಂಟೆಗಳ ಒಳಗಾಗಿ ವಿದೇಶಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಆದರೆ ಲಾಕ್​ಡೌನ್​ನಿಂದಾಗಿ ಈ ಅದು ಸಾಧ್ಯವಾಗುವುದಿಲ್ಲ. ನಾಡಾದ ಸ್ವಂತ ಪ್ರಯೋಗಾಲಯ ಸದ್ಯ ಅಂತಾರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದಿಂದ (ವಾಡಾ) ಅಮಾನತುಗೊಂಡಿದೆ.

ಡೋಪಿಂಗ್​ಗೆ ಮುನ್ನ ಕರೊನಾ ಟೆಸ್ಟ್

ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆ ಒಳಗಾಗುವ ಮುನ್ನ ಕರೊನಾ ಪರೀಕ್ಷೆಗೂ ಒಳಗಾಗಬೇಕಾಗಿದೆ. ಡೋಪಿಂಗ್ ಪರೀಕ್ಷೆಯ ವೇಳೆ ಕ್ರೀಡಾಪಟುಗಳು ಮತ್ತು ಡಿಸಿಒ ಇಬ್ಬರ ಆರೋಗ್ಯದ ಸುರಕ್ಷತೆಯ ಬಗ್ಗೆಯೂ ನಾಡಾ ಎಚ್ಚರಿಕೆ ವಹಿಸಲಿದೆ. ಸಾಮಾನ್ಯವಾಗಿ ಡೋಪಿಂಗ್ ಪರೀಕ್ಷೆಯ ವೇಳೆ ಡಿಸಿಒ, ಮೂತ್ರದ ಸ್ಯಾಂಪಲ್ ಪಡೆದುಕೊಳ್ಳುವುದರ ಹೊರತಾಗಿ ಕ್ರೀಡಾಪಟುವಿನ ಪ್ರತಿ ಹೆಜ್ಜೆಯ ಮೇಲೂ ಕಣ್ಣಿಟ್ಟಿರುತ್ತಾರೆ. ಈಗಲೂ ಅದು ಮುಂದುವರಿಯಲಿದೆ. ಆದರೆ ಇಬ್ಬರ ನಡುವೆ 2 ಯಾರ್ಡ್​ಗಳಷ್ಟು ಸಾಮಾಜಿಕ ಅಂತರ ಇರಬೇಕಾಗುತ್ತದೆ ಎಂದು ನಾಡಾ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net