6ನೇ ಬಾರಿ CSK ಕಪ್ ಗೆಲ್ಲೋದು ಕಷ್ಟಸಾಧ್ಯ! ಹೇಗೆ ಅಂತೀರಾ? ಈ 3 ವಿಷಯಗಳೇ ಅದಕ್ಕೆ ಬಲವಾದ ಕಾರಣ​

ವಿಜಯವಾಣಿ - 2024-12-03T072327.460
Published on

ನವದೆಹಲಿ: ಇತ್ತೀಚೆಗಷ್ಟೇ ದುಬೈನಲ್ಲಿ ಎರಡು ದಿನಗಳ ಕಾಲ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್​ ಹಾಗೂ ಯುವ ಆಟಗಾರರ ಖರೀದಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಪ್ರಕ್ರಿಯೆಯಲ್ಲಿ ಭರವಸೆ ಮತ್ತು ಬಲ ತುಂಬುವ ಆಟಗಾರರನ್ನೇ ಆಯಾ ಫ್ರಾಂಚೈಸಿಗಳು ಭರ್ಜರಿ ಬಿಡ್ಡಿಂಗ್​ ಮೂಲಕ ಕರೆದುಕೊಂಡಿವೆ. ಅರ್ಷ್​ದೀಪ್​ ಸಿಂಗ್​, ರಿಷಭ್ ಪಂತ್​, ಶ್ರೇಯಸ್​ ಅಯ್ಯರ್, ಯಜುವೇಂದ್ರ ಚಹಲ್, ವೆಂಕಟೇಶ್​​ ಅಯ್ಯರ್​​ ಸೇರಿದಂತೆ ಒಂದಷ್ಟು ಸ್ಟಾರ್ ಕ್ರಿಕೆಟಿಗರು ಮಾತ್ರ ದುಬಾರಿ ಮೊತ್ತಕ್ಕೆ ಖರೀದಿಯಾಗಿ, ಕ್ರಿಕೆಟ್​ ಪ್ರಿಯರಲ್ಲಿ ಆಶ್ಚರ್ಯ ಮೂಡಿಸಿದರು. ಇನ್ನು 10 ತಂಡಗಳ ಪೈಕಿ ಐದು ಬಾರಿ ಚಾಂಪಿಯನ್​ ಪಟ್ಟ ಪಡೆದಿರುವ ಚೆನ್ನೈ ಸೂಪರ್​ ಕಿಂಗ್ಸ್ ಅತ್ಯುತ್ತಮ ಖರೀದಿ ಮಾಡಿದ್ದೇ ಆದರೂ ಈ ಬಾರಿ ಟ್ರೋಫಿ ಗೆಲ್ಲುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಕೆ ಕಾರಣಗಳೂ ಇವೆ.

ಪ್ರತಿಬಾರಿ ತಮ್ಮ ತಂಡವನ್ನು ಯುವ ಆಟಗಾರರು, ಅನುಭವಿ ಸ್ಟಾರ್​ ಕ್ರಿಕೆಟಿಗರಿಂದಲೇ ಬಲಿಷ್ಠ ಪಡಿಸುವ ಚೆನ್ನೈ ಸೂಪರ್ ಕಿಂಗ್ಸ್​, ಆಲ್​ರೌಂಡ್​ ಪ್ರದರ್ಶನ ನೀಡುವ ಹಾಗೂ ಯಾವ ಫ್ರಾಂಚೈಸಿಗೂ ಬೇಡವಾದ ಆಟಗಾರರನ್ನೇ ಗುರಿಯಾಗಿಸಿಕೊಂಡು, ಹರಾಜಿನಲ್ಲಿ ಖರೀದಿ ಮಾಡುತ್ತದೆ. ಇಂತಹ ಬುದ್ಧಿವಂತಿಕೆ ಖರೀದಿಗೆ ಹೆಸರುವಾಸಿಯಾಗಿರುವ ಸಿಎಸ್​ಕೆ, ಪ್ರಸ್ತುತ ಅಂಪೈರ್​ ಫಿಕ್ಸಿಂಗ್​ ಆರೋಪವನ್ನು ಎದುರಿಸುತ್ತಿದೆ. ಲಲಿತ್​ ಮೋದಿ ಅವರ ಗಂಭೀರ ಆರೋಪಗಳ ಮಧ್ಯೆ ಮ್ಯಾನೇಜ್​ಮೆಂಟ್​ ಹೇಗೆ ಪ್ರತಿಕ್ರಿಯೆ ನೀಡಲಿದೆ? 2025ರ ಐಪಿಎಲ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆ ಗರಿಗೆದರಿದೆ.

ಸತತ ಐದು ಬಾರಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಐಪಿಎಲ್​ ಚಾಂಪಿಯನ್ಸ್ ಆಗಿ ಮಿಂಚಿರುವ ಸಿಎಸ್​ಕೆ, 2025ರ​ 18ನೇ ಆವೃತ್ತಿಯಲ್ಲಿಯೂ ಸಹ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಲು ಎದುರುನೋಡುತ್ತಿದೆ. ಆದರೆ, ಈ ಬಾರಿ ಅಂದುಕೊಂಡಂತೆ ನಡೆಯುವುದು ಕೊಂಚ ಕಷ್ಟ ಎಂದು ಕ್ರಿಕೆಟ್​ ವರದಿಯೊಂದು ಉಲ್ಲೇಖಿಸಿದೆ. ಅಸಲಿಗೆ ತಂಡಕ್ಕೆ ಧೋನಿ ಮರಳಿದ್ದೇ ಆದರೂ ಆರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಈ ಮೂರು ಕಾರಣಗಳನ್ನು ಅಡ್ಡಿಯಾಗಬಹದು ಎಂದು ಹೇಳಲಾಗಿದೆ.

1. ಧೋನಿ @43

ತನ್ನ ನಿಯಮದಲ್ಲಿ ಕೊಂಚ ಬದಲಾವಣೆ ತಂದ ಬಿಸಿಸಿಐ, 23 ವರ್ಷದ ಧೋನಿ ಅವರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಸಿಎಸ್​ಕೆ ಖರೀದಿಗೆ ಅನುಕೂಲ ಮಾಡಿಕೊಟ್ಟಿತು. ಈ ನಿಯಮದಡಿ ಫ್ರಾಂಚೈಸಿ 'ಕ್ಯಾಪ್ಟನ್ ಕೂಲ್'​ರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿತು. ಕಳೆದ ವರ್ಷದಿಂದ ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ, ತಮ್ಮ ಅಭಿಮಾನಿಗಳಿಗೋಸ್ಕರ ಮತ್ತು ತಂಡಕ್ಕೋಸ್ಕರ ಶ್ರಮಮೀರಿ ಆಡುತ್ತಿದ್ದಾರೆ. 43ನೇ ವಯಸ್ಸಿನಲ್ಲಿಯೂ ಫಿಟ್ನೆಸ್​ ನೋಡಿಕೊಂಡು, ಮೈದಾನಕ್ಕಿಳಿಯುತ್ತಿರುವ ಎಂ.ಎಸ್​ಡಿ ಮುಂಚಿನಂತೆ ಅಬ್ಬರಿಸುವುದು ಕಷ್ಟಸಾಧ್ಯವಾಗಿದೆ. ಅದಕ್ಕೆ ಇಂಜುರಿ ಜತೆಗೆ ವಯಸ್ಸಿನ ಅಡ್ಡಿ, ಆತಂಕಗಳು ದೊಡ್ಡ ಕಾರಣಗಳಾಗಿ ನಿಂತಿವೆ.

20 ಓವರ್​ ಮ್ಯಾಚ್​ ಮುಗಿಯುವವರೆಗೂ ವಿಕೆಟ್​ ಕೀಪಿಂಗ್​ ಮಾಡುವುದು ಧೋನಿಗೆ ಸವಾಲಿನ ಪ್ರಶ್ನೆ. ಅದರ ಜತೆಗೆ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟ್​ಗೆ ಬಂದು, ಕ್ರೀಸ್​ಗೆ ಅಂಟಿಕೊಳ್ಳುವುದು ಮತ್ತಷ್ಟು ಕಷ್ಟವಾಗಿದೆ. ಇದು ಮಾಜಿ ಕ್ಯಾಪ್ಟನ್ ಮುಂದಿರುವ ಒಂದಷ್ಟು ಸವಾಲುಗಳು. ಅದ್ಭುತ ಫಿನಿಶರ್​ ಎಂದೇ ಖ್ಯಾತಿ ಗಳಿಸಿರುವ ಧೋನಿ, ಈ ಹಿಂದಿನ ಆವೃತ್ತಿಗಳಲ್ಲಿ ಕೊನೆಯ ಕ್ಷಣ ಬಂದು, ಇಡೀ ಪಂದ್ಯದ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸುತ್ತಿದ್ದರು. ಆದರೆ, ಈ ಬಾರಿಯೂ ಅದೇ ರೀತಿ ನಡೆಯಲಿದ್ಯಾ? ಇದು ಸಾಧ್ಯವೇ? ಇಂತಹ ಸವಾಲುಗಳನ್ನು ಭೇದಿಸಿ, ತಂಡದ ಪರ ಮಾಹಿ ಹೇಗೆ ಅಬ್ಬರಿಸುತ್ತಾರೆ ಎಂಬುದು ಸದ್ಯ ಕಾಡುತ್ತಿರುವ ಪ್ರಶ್ನೆ.

2) ತವರಿನಲ್ಲಿ ಪಿಚ್​ ಓಕೆ!

ಸಿಎಸ್​ಕೆ ತವರಿನ ಚೆಪಾಕ್‌ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಸಿಎಸ್​ಕೆ ಬಲವಾಗಿ ನಂಬಿದೆ. ಪ್ರಸ್ತುತ ತಂಡದಲ್ಲಿ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ನೂರ್ ಅಹ್ಮದ್ ಇದ್ದಾರೆ. ಆದರೆ ಇದೇ ಬೌಲಿಂಗ್ ದಾಳಿ ಉಳಿದ ಪಿಚ್​ಗಳಲ್ಲಿಯೂ ನಡೆಯುವುದು ಕೊಂಚ ಕಷ್ಟ. ಇತರೆ ಪಿಚ್​ಗಳಲ್ಲಿ ಅವರ ಫಾಸ್ಟ್​ ಬೌಲರ್​ಗಳು ಅಬ್ಬರಿಸುವುದು ಕಡಿಮೆಯೇ. ಹೀಗಾಗಿ ತವರು ಬಿಟ್ಟರೆ ಬೇರೆ ಪಿಚ್​ಗಳಲ್ಲಿ ಬೌಲರ್​ಗಳು ಕಮಾಲ್​ ಮಾಡುವುದು ಈ ಬಾರಿ ಕಷ್ಟವಾಗಬಹುದು ಎಂದು ಹೇಳಲಾಗಿದೆ.

3. ಮಿಂಚಿನಂತ ಫಿನಿಶರ್​ ಇಲ್ಲ

ಈ ಹಿಂದೆ ಸಿಎಸ್​ಕೆ ಪರ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ 7ನೇ ಕ್ರಮಾಂಕದಲ್ಲಿ ಬಂದು, ತಂಡಕ್ಕೆ ಆಸರೆಯಾಗುತ್ತಿದ್ದರು. ಚೇಸಿಂಗ್ ಇರಲಿ ಅಥವಾ ಮೊದಲನೇ ಬ್ಯಾಟಿಂಗ್ ಇರಲಿ ಇವರಿಬ್ಬರು ಟೀಮ್​ ಸೋಲಿನ ಸಮಯದಲ್ಲಿ ಆಪತ್ಭಾಂಧವರಂತೆ ಕೈಹಿಡಿದಿದ್ದಾರೆ. ಅಬ್ಬರದ ಬ್ಯಾಟಿಂಗ್ ನಡೆಸಿ, ಟೀಮ್​ಗೆ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿರುವ ಸ್ಟಾರ್​ ಆಟಗಾರರು. ಆದರೆ, ಕಳೆದ ವರ್ಷಗಳಲ್ಲಿ ಆ ಫಿನಿಶಿಂಗ್​ ಸ್ಟೈಲ್​ನ ಧೋನಿ ಅಥವಾ ಜಡೇಜಾರಿಂದ ಅಷ್ಟಾಗಿ ತೋರಿಸಿಲ್ಲ. ಈ ವಿಷಯದಲ್ಲಿ ಧೋನಿ ಅವರಿಗೆ ವಯಸ್ಸು ಅಡ್ಡಿಯಾಗಿದ್ದರೆ, ಜಡೇಜಾಗೆ ಕಳಪೆ ಪ್ರದರ್ಶನ ಕಾರಣವಾಗಿದೆ. ಸದ್ಯ ಸಿಎಸ್​ಕೆಗೆ ಅತ್ಯುತ್ತಮ ಫಿನಿಶರ್​ ಸಮಸ್ಯೆ ಕಾಡಲಾರಂಭಿಸಿದ್ದು, ಇದು ತಂಡದ ಗೆಲುವಿಗೆ ಅಡ್ಡಿಯಾಗಬಹುದು ಎಂದೇ ನಂಬಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net