

ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಎದುರು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಸರಣಿ ಮುಗಿಯುವ ಮುನ್ನವೇ ಭಾರತ ತಂಡದಿಂದ (Team India) ಮೂವರನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಕಾರಣವನ್ನು ಸಹ ಉಲ್ಲೇಖಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ (Test Series) ಆಯ್ಕೆಯಾಗಿದ್ದ ಸರ್ಫರಾಝ್ ಖಾನ್, ಧ್ರುವ್ ಜುರೇಲ್ ಹಾಗೂ ಯಶ್ ದಯಾಳ್ ಅವರನ್ನು ಭಾರತ ತಂಡದಿಂದ ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಮೂವರು ಆಟಗಾರರು ಮುಂಬರುವ ಇರಾನಿ ಕಪ್ಗೆ ಆಯ್ಕೆಯಾಘಿದ್ದು, ಅಕ್ಟೋಬರ್ 01ರಿಂದ ಆರಂಭವಾಗಲಿರುವ ಸರಣಿಯಲ್ಲಿ ಈ ಮೂವರು ಆಟಗಾರರು ಕಣಕ್ಕಿಳಿಯಲಿದ್ದಾರೆ.
ಬಾಂಗ್ಲಾದೇಶ ವಿರುದ್ಧ ದ ಮೊಲದ ಪಂದ್ಯದಲ್ಲೂ ಈ ಮೂವರು ಆಟಗಾರರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ ಅವರು ಬೆಂಚ್ ಕಾಯಬೇಕಾಗಿ ಬಂತು. ಸರಣಿಯ ಎರಡನೇ ಪಂದ್ಯದಲ್ಲೂ ಈ ಮೂವರು ಬೆಂಚ್ ಕಾದಿದ್ದರು. ಇದೀಗ ಈ ಮೂವರು ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲಾಗಿದ್ದು, ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ವಿಕೆಟ್‌ಕೀಪರ್-ಬ್ಯಾಟರ್ ಜುರೆಲ್ ಮತ್ತು ಎಡಗೈ ವೇಗದ ಬೌಲರ್ ದಯಾ ರೆಸ್ಟ್ ಆಫ್ ಇಂಡಿಯಾವನ್ನು ಪ್ರತಿನಿಧಿಸಲಿದ್ದು, ಸರ್ಫರಾಝ್ ಖಾನ್ ಮುಂಬೈ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಕ್ಟೋಬರ್ 01ರಿಂದ ಲಖನೌನಲ್ಲಿ ಇರಾನಿ ಕಪ್ ಆರಂಭವಾಗಲಿದ್ದು, ಮುಂಬೈ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದರೆ, ರೆಸ್ಟ್ ಆಫ್ ಇಂಡಿಯಾ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ.