ವಿದೇಶಿ ಆಟಗಾರರಿಗೆ BCCI ಶಾಕ್​; ಇನ್ಮುಂದೆ ಈ ರೀತಿ ಮಾಡಿದ್ರೆ IPLನಿಂದ ಬ್ಯಾನ್​ ಆಗೋದಂತು ಪಕ್ಕಾ

web ipl retain
Published on

ಮುಂಬೈ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ (IPL)​ ರಿಟೇನ್ (Retain)​ ನಿಯಮಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಟೂರ್ನಿ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಅದರಂತೆ ಈ ಬಾರಿಯ ಹರಾಜಿಗೂ ಮುನ್ನ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಂದರೆ ಇಲ್ಲಿ ಐವರು ಆಟಗಾರರನ್ನು ನೇರವಾಗಿ ರಿಟೇನ್ ಮಾಡಿಕೊಳ್ಳಬಹುದಾಗಿದ್ದು, ಓರ್ವನ ಮೇಲೆ ಆರ್​ಟಿಎಂ ಆಯ್ಕೆ ಬಳಸಿಕೊಳ್ಳಬಹುದಾಗಿದೆ.

ನೂತನ ನಿಯಮಗಳ ಮೂಲಕ ಇದೇ ಮೊದಲ ಬಾರಿಗೆ ಹೆಚ್ಚಿನ ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದ್ದು, ಇದರ ಜೊತೆಗೆ ಫ್ರಾಂಚೈಸಿಗಳು ಇಟ್ಟಿದ್ದ ಮತ್ತೊಂದು ಬೇಡಿಕೆಗೂ ಸಮ್ಮತಿಸಿದೆ. ಇದಲ್ಲದೆ ಈ ನಿಯಮವು ಈ ಬಾರಿಯ ಐಪಿಎಲ್​ನಿಂದಲೇ ಜಾರಿಯಾಗುತ್ತಿದ್ದು, ವಿದೇಶಿ ಆಟಗಾರರಿಗೆ ನಡುಕ ಹುಟ್ಟಿಸಿದೆ.

ಅದೇನೆಂದರೆ ಐಪಿಎಲ್​ಗೆ ರಿಜಿಸ್ಟಾರ್​ ಮಾಡಿಕೊಂಡು ಆ ಬಳಿಕ ಯಾವುದಾದರು ತಂಡಕ್ಕೆ ಮಾರಾಟವಾದ ಬಳಿಕ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಈ ಹಿಂದೆ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಆಗ್ರಹಿಸಿದ್ದವು.

ಇದೀಗ ಫ್ರಾಂಚೈಸಿಗಳ ಬೇಡಿಕೆಗೆ ಬಿಸಿಸಿಐ ಸಮ್ಮತ್ತಿ ಸೂಚಿಸಿದ್ದು, ಗಾಯ ಅಥವಾ  ನಿರ್ದಿಷ್ಟ ಕಾರಣದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್​ನಿಂದ ಹಿಂದೆ ಸರಿದರೆ ಅಂತಹ ಆಟಗಾರನನ್ನು ಎರಡು ವರ್ಷಗಳ ಕಾಲ ಬ್ಯಾನ್​ ಮಾಡಲಾಗುತ್ತದೆ. ಈ ಮೂಲಕ ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಇನ್ಮುಂದೆ ಐಪಿಎಲ್ ಆಡುವುದು ಕಡ್ಡಾಯಗೊಳಿಸಲಾಗಿದೆ. ಐಪಿಎಲ್​ನ ಈ ಹೊಸ ನಿಯಮ ವಿದೇಶಿ ಆಟಗಾರರಿಗೆ ನಡುಕ ಹುಟ್ಟಿಸಿದ್ದು, ಮಂದೆ ಹೇಗೆ ಎಂದು ಚಿಂತೆಯಲ್ಲಿದ್ದಾರೆ.

ಒಂದು ವೇಳೆ ಐಪಿಎಲ್​ ತಂಡಗಳಿಗೆ ಆಯ್ಕೆಯಾಗಿ ಟೂರ್ನಿಯಿಂದ ಹಿಂದೆ ಸರಿದರೆ, ಮುಂದಿನ 2 ವರ್ಷಗಳವರೆಗೆ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಇಡೀ ಟೂರ್ನಿಯಿಂದಲೇ 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರು ವಿನಾಕಾರಣ ಟೂರ್ನಿಯಿಂದ ಹಿಂದೆ ಸರಿದರೆ 2 ವರ್ಷಗಳ ಬ್ಯಾನ್​ಗೆ ಒಳಗಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net