

ನವದೆಹಲಿ: ಐಸಿಸಿ ಕ್ಯಾಲೆಂಡರ್ ಅನ್ವಯ ಭಾರತ ತಂಡ ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡು ಸೀಮಿತ ಓವರ್ ಕ್ರಿಕೆಟ್ ಸರಣಿ ಆಡಬೇಕಾಗಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಭಾರತದ ಪ್ರಮುಖ ಆಟಗಾರರನ್ನು ಒಳಗೊಂಡ ತಂಡ ಈ ಸಮಯದಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುವ ನಡುವೆಯೂ ಬಿಸಿಸಿಐ, ಶ್ರೀಲಂಕಾ ಪ್ರವಾಸಕ್ಕೆ ಮತ್ತೊಂದು ಪ್ರತ್ಯೇಕ ತಂಡವನ್ನು ಕಳುಹಿಸಲು ಮುಂದಾಗಿದೆ. ಟೆಸ್ಟ್ ತಂಡದಲ್ಲಿರದ ಕೆಲ ಅನುಭವಿ ಆಟಗಾರರ ಜತೆಗೆ ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರು ಈ 2ನೇ ಭಾರತ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಇದೆ.
ಭಾರತ ತಂಡ ಜೂನ್ 18ರಿಂದ 22ರವರೆಗೆ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆಡಲಿದ್ದು, ಬಳಿಕ ಆತಿಥೇಯ ಇಂಗ್ಲೆಂಡ್ ವಿರುದ್ಧ ಆಗಸ್ಟ್ 4ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಾಗಿದೆ. ಅಂದರೆ ಈ ನಡುವೆ ಒಂದು ತಿಂಗಳಿಗೂ ಹೆಚ್ಚಿನ ಅಂತರವಿದ್ದು, ಐಸಿಸಿ ಕ್ಯಾಲೆಂಡರ್ ಅನ್ವಯ ಭಾರತ ತಂಡ ಈ ಸಮಯದಲ್ಲಿ ಶ್ರೀಲಂಕಾಕ್ಕೆ ತೆರಳಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ಆಡಬೇಕಾಗಿದೆ. ಕರೊನಾ ಕಾಲದ ಕ್ವಾರಂಟೈನ್ ನಿರ್ಬಂಧಗಳಿಂದಾಗಿ ವಿರಾಟ್ ಕೊಹ್ಲಿ ಪಡೆಯೇ ಈ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿ ಬಳಿಕ ಇಂಗ್ಲೆಂಡ್‌ಗೂ ಮರಳುವುದು ಕಷ್ಟಕರ. ಹೀಗಾಗಿ ಶ್ರೀಲಂಕಾಕ್ಕೆ ಪ್ರತ್ಯೇಕ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
‘ಜುಲೈ ತಿಂಗಳಲ್ಲಿ ನಿಗದಿಯಂತೆಯೇ ಶ್ರೀಲಂಕಾ ಪ್ರವಾಸವನ್ನೂ ಕೈಗೊಳ್ಳಲು ನಾವು ಯೋಜಿಸಿದ್ದೇವೆ. ಇದಕ್ಕಾಗಿ ಸೀಮಿತ ಓವರ್ ಕ್ರಿಕೆಟ್ ತಜ್ಞರನ್ನೇ ಒಳಗೊಂಡ ಪ್ರತ್ಯೇಕ ತಂಡ ರಚನೆಯಾಗಲಿದೆ’ ಎಂದು ಗಂಗೂಲಿ ತಿಳಿಸಿದ್ದಾರೆ.
ಇಂಗ್ಲೆಂಡ್‌ಗೆ ಸ್ಟಾರ್ ಆಟಗಾರರ ಜತೆಗೆ ಟೆಸ್ಟ್ ತಜ್ಞರ ತಂಡ ತೆರಳಿದ್ದು, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್‌ರಂಥ ಕೆಲ ಅನುಭವಿ ಆಟಗಾರರು ತವರಿನಲ್ಲೇ ಇದ್ದಾರೆ. ಹೀಗಾಗಿ ಅವರೆಲ್ಲರಿಗೂ ಜುಲೈ ವೇಳೆಗೆ ಮ್ಯಾಚ್ ಫಿಟ್ ಆಗಿರಲು ಬಿಸಿಸಿಐ ಸೂಚಿಸಿದೆ. ಶ್ರೀಲಂಕಾ ಪ್ರವಾಸಕ್ಕೆ ಪ್ರಮುಖ ಆಟಗಾರರಿಲ್ಲದ ಬಲಿಷ್ಠ ತಂಡವನ್ನು ರೂಪಿಸುವ ಸವಾಲು ಕೂಡ ಆಯ್ಕೆಗಾರರಿಗೆ ಎದುರಾಗಲಿದೆ.
ಧವನ್, ಪಾಂಡ್ಯ, ಪೃಥ್ವಿ ಒಳಗೊಂಡ ತಂಡ?
ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಪ್ರಮುಖ ಕ್ರಿಕೆಟಿಗರನ್ನು ಒಳಗೊಂಡ ತಂಡ ಇಂಗ್ಲೆಂಡ್‌ನಲ್ಲಿರುವ ನಡುವೆಯೂ ಶ್ರೀಲಂಕಾ ಪ್ರವಾಸದ ಸೀಮಿತ ಓವರ್ ಸರಣಿಗೆ ಮತ್ತೊಂದು ಬಲಿಷ್ಠವಾದ ತಂಡವನ್ನೇ ರೂಪಿಸುವ ಸಾಮರ್ಥ್ಯ ಭಾರತಕ್ಕಿದೆ. ಐಪಿಎಲ್‌ನಲ್ಲಿ ಮಿಂಚಿದ ಆಟಗಾರರೇ ಈ ತಂಡದಲ್ಲಿ ಹೆಚ್ಚಿನ ಅವಕಾಶ ಪಡೆಯುವ ಸಾಧ್ಯತೆ ಇದೆ. ಶಿಖರ್ ಧವನ್ ಮತ್ತು ಪೃಥ್ವಿ ಷಾ ಈ ತಂಡಕ್ಕೆ ಆರಂಭಿಕರಾಗಿ ಆಯ್ಕೆಯಾಗುವ ನಿರೀಕ್ಷೆ ಇದ್ದರೆ, ಕನ್ನಡಿಗ ದೇವದತ್ ಪಡಿಕಲ್ ಮತ್ತೋರ್ವ ಆರಂಭಿಕರಾಗಿ ಸ್ಥಾನ ಪಡೆಯಬಹುದು. ತಂಡದ ಮಧ್ಯಮ ಕ್ರಮಾಂಕಕ್ಕೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕನ್ನಡಿಗ ಮನೀಷ್ ಪಾಂಡೆ ಮುಂತಾದ ಆಟಗಾರರಿದ್ದರೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ರಾಹುಲ್ ತೆವಾಟಿಯಾ ಆಲ್ರೌಂಡರ್ ಸ್ಥಾನ ತುಂಬಬಲ್ಲರು. ಸ್ಪಿನ್ನರ್‌ಗಳಾಗಿ ಯಜುವೇಂದ್ರ ಚಾಹಲ್, ರಾಹುಲ್ ಚಹರ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ ಅವಕಾಶ ಪಡೆಯಬಹುದು. ವೇಗದ ಬೌಲಿಂಗ್‌ಗೆ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ದೀಪಕ್ ಚಹರ್, ಹರ್ಷಲ್ ಪಟೇಲ್, ಜೈದೇವ್ ಉನಾದ್ಕತ್, ಚೇತನ್ ಸಕಾರಿಯಾ, ನವದೀಪ್ ಸೈನಿ ಮುಂತಾದ ಆಟಗಾರರಿದ್ದಾರೆ. ಶ್ರೇಯಸ್ ಅಯ್ಯರ್ ಫಿಟ್ ಆದರೆ ಈ ತಂಡಕ್ಕೆ ನಾಯಕರಾಗಿ ನೇಮಕವಾಗುವ ಸಾಧ್ಯತೆಯೂ ಇದೆ.
2ನೇ ಬಾರಿ 2 ತಂಡ ರಚನೆ!
ಭಾರತ 2 ಪ್ರತ್ಯೇಕ ತಂಡಗಳನ್ನು ರಚಿಸುವುದು ಇದು 2ನೇ ಬಾರಿ ಆಗಿರಲಿದೆ. ಈ ಹಿಂದೆ 1998ರಲ್ಲಿ ಕೌಲಾಲಂಪುರದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಒಂದು ತಂಡ ಕಣಕ್ಕಿಳಿದಿದ್ದರೆ, ಅದೇ ಸಮಯದಲ್ಲಿ ಮತ್ತೊಂದು ತಂಡ ಕೆನಡದಲ್ಲಿ ಸಹಾರಾ ಕಪ್‌ನಲ್ಲಿ ಆಡಿತ್ತು.