

ನವದೆಹಲಿ: ಅನುಭವಿ ಆಟಗಾರರ ತಂಡ ಟೆಸ್ಟ್ ಸರಣಿಯಲ್ಲಿ ಆಕ್ರಮಣಕಾರಿ ಆಟದ ಮೂಲಕ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದ ಬಳಿಕ ಭಾರತದ ಯುವ ಆಟಗಾರರ ತಂಡವೂ ಮೊದಲ ಟಿ20 ಪಂದ್ಯದಲ್ಲೂ ಸ್ಪಷ್ಟ ಮೇಲುಗೈ ಸಾಧಿಸಿತು. ಇದೀಗ ಈ ಪ್ರಾಬಲ್ಯವನ್ನು ಮುಂದುವರಿಸುವತ್ತ ಸೂರ್ಯಕುಮಾರ್ ಯಾದವ್ ಪಡೆ ದೃಷ್ಟಿ ನೆಟ್ಟಿದೆ. ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.
ಪ್ರಮುಖ ಆಟಗಾರರ ಗೈರಿನ ನಡುವೆ ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವಲ್ಲಿ ಯುವ ಆಟಗಾರರು ಗ್ವಾಲಿಯರ್ನಲ್ಲಿ ಯಶಸ್ಸು ಕಂಡಿದ್ದಾರೆ. ಮಿಂಚಿನ ವೇಗದ ಬೌಲರ್ ಮಯಾಂಕ್ ಯಾದವ್ ನಿರೀಕ್ಷೆಯಂತೆಯೇ ಯಶಸ್ವಿ ಪದಾರ್ಪಣೆ ಮಾಡಿದ್ದರೆ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ 3 ವರ್ಷಗಳ ಬಳಿಕ ಯಶಸ್ವಿ ಪುನರಾಗಮನ ಕಂಡಿದ್ದಾರೆ. ಭಾರತೀಯ ಯುವ ತಂಡದ ದಿಟ್ಟ ನಿರ್ವಹಣೆ ಎದುರು ಬಾಂಗ್ಲಾದ ಅನುಭವಿ ತಂಡ ಸಂಪೂರ್ಣ ಮಂಕಾಗಿತ್ತು.
ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಅವರ ಕೋಚ್&ಕ್ಯಾಪ್ಟನ್ ಕಾಂಬಿನೇಷನ್ನಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡವನ್ನು ಗೌತಮ್ ಗಂಭೀರ್-ಸೂರ್ಯಕುಮಾರ್ ಯಾದವ್ ಜೋಡಿ ಅದೇ ಮಾದರಿಯಲ್ಲಿ ಮುನ್ನಡೆಸುವ ಲಕ್ಷಣಗಳೂ ಕಾಣಿಸಿವೆ.
ನಮ್ಮ ಬ್ಯಾಟರ್ಗಳಿಗೆ ಟಿ20ಯಲ್ಲಿ 180 ರನ್ ಸ್ಕೋರ್ ಮಾಡಲು ಗೊತ್ತಿಲ್ಲ ಎಂದು ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮೊದಲ ಪಂದ್ಯದ ಬಳಿಕ ಒಪ್ಪಿಕೊಂಡಿದ್ದರು. ಯಾಕೆಂದರೆ ತವರಿನಲ್ಲಿ 140-150 ರನ್ ದಾಖಲಾಗುವಂಥ ಪಿಚ್ಗಳಲ್ಲೇ ಆಡಿ ಅವರಿಗೆ ಅಭ್ಯಾಸವಾಗಿದೆ. ಹೀಗಾಗಿ ಬಾಂಗ್ಲಾ ತಂಡ ಈ ದೌರ್ಬಲ್ಯವನ್ನು ನಿವಾರಿಸಿಕೊಂಡರಷ್ಟೇ ಕೊನೇ ಪಂದ್ಯದವರೆಗೆ ಸರಣಿ ಜೀವಂತವಿಡುವ ಕನಸು ಕಾಣಬಹುದಾಗಿದೆ. ಇನ್ನು ಮಹಮುದುಲ್ಲಾಗೆ ಗೆಲುವಿನ ವಿದಾಯ ನೀಡುವುದು ಬಾಂಗ್ಲಾ ತಂಡಕ್ಕೆ ಸ್ಫೂರ್ತಿ ತುಂಬಬಹುದಾಗಿರುವ ಅಂಶವಾಗಿದೆ.
ಟೀಮ್ ನ್ಯೂಸ್:
ಭಾರತ: ಮೊದಲ ಪಂದ್ಯದಲ್ಲಿ ಎಲ್ಲವೂ ಭಾರತ ಬಯಸಿದಂತೆ ನಡೆದಿದ್ದರಿಂದ ಆಡುವ 11ರ ಬಳಗದಲ್ಲಿ ಬದಲಾವಣೆ ಅನುಮಾನ. ಆದರೆ ಯುವ ಆಟಗಾರರಿಗೆ ಆವರ್ತನ ಪದ್ಧತಿಯಂತೆ ಅವಕಾಶ ನೀಡಲು ಮುಂದಾದರೆ, ವೇಗಿ ಹರ್ಷಿತ್ ರಾಣಾಗೂ ಪದಾರ್ಪಣೆ ಅವಕಾಶ ಒಲಿಯಬಹುದು. ತಿಲಕ್ ವರ್ಮಗೂ ಅವಕಾಶ ಲಭಿಸಬಹುದು.
ಬಾಂಗ್ಲಾದೇಶ: ಮೊದಲ ಪಂದ್ಯದ ವೈಲ್ಯದ ಬಳಿಕ ಬಾಂಗ್ಲಾ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಯ ನಿರೀಕ್ಷೆ ಇದೆ. ಆರಂಭಿಕ ಪರ್ವೇಜ್ ಹೊಸೈನ್ ಬದಲಿಗೆ ತಂಜಿದ್ ಹಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ.
*ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ಮಹಮದುಲ್ಲಾ ಟಿ20ಗೆ ವಿದಾಯ
ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಮಹಮದುಲ್ಲಾ ಭಾರತ ವಿರುದ್ಧದ ಸರಣಿಯ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಇದರಿಂದ ಶನಿವಾರ ಹೈದರಾಬಾದ್ನಲ್ಲಿ ನಡೆಯಲಿರುವ ಸರಣಿಯ 3ನೇ ಪಂದ್ಯ 38 ವರ್ಷದ ಮಹಮುದುಲ್ಲಾ ವೃತ್ತೀಜಿವನದ ಕೊನೇ ಟಿ20 ಪಂದ್ಯವಾಗಿರಲಿದೆ. "ನಾನು ಈ ಮೊದಲೇ ನಿರ್ಧರಿಸಿದಂತೆ ಹಾಲಿ ಸರಣಿಯ ಕೊನೇ ಪಂದ್ಯದಲ ಬಳಿಕ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಲಿದ್ದೇನೆ. ನಾನಿನ್ನೂ ಏಕದಿನ ಕ್ರಿಕೆಟ್ನತ್ತ ಗಮನಕೇಂದ್ರೀಕರಿಸಲಿದ್ದೇನೆ' ಎಂದು ಮಹಮದುಲ್ಲಾ 2ನೇ ಟಿ20 ಪಂದ್ಯಕ್ಕೆ ಮುನ್ನ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮಹಮದುಲ್ಲಾ ಇದುವರೆಗೆ 50 ಟೆಸ್ಟ್, 232 ಏಕದಿನ ಮತ್ತು 139 ಟಿ20 ಪಂದ್ಯ ಆಡಿದ್ದಾರೆ. ಅವರು 2021ರಲ್ಲೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಮಹಮದುಲ್ಲಾ 2018ರಿಂದ 2022ರವರೆಗೆ ಬಾಂಗ್ಲಾ ನಾಯಕರಾಗಿ 43 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದರು.
ಪಿಚ್ ರಿಪೋರ್ಟ್
ಕಳೆದ ಐಪಿಎಲ್ನಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 5 ಪಂದ್ಯಗಳ 10 ಇನಿಂಗ್ಸ್ಗಳಲ್ಲಿ 8ರಲ್ಲಿ 200 ಪ್ಲಸ್ ಮೊತ್ತ ದಾಖಲಾಗಿತ್ತು. ಇಂಪ್ಯಾಕ್ಟ್ ಪ್ಲೇಯರ್ ಕೂಡ ಇದರಲ್ಲಿ ಪ್ರಭಾವ ಬೀರಿರಬಹುದು ಎಂಬ ಲೆಕ್ಕಾಚಾರವನ್ನು ಬದಿಗಿಟ್ಟರೂ, ಈ ಪಂದ್ಯದಲ್ಲಿ ರನ್ಮಳೆ ನಿರೀಕ್ಷಿಸಬಹುದಾಗಿದೆ. ಸ್ವಲ್ಪ ಮಟ್ಟಿಗೆ ಇಬ್ಬನಿ ಸಮಸ್ಯೆ ಕಾಡಬಹುದು.
8 ಬ್ಯಾಟರ್ಸ್-10 ಬೌಲರ್ಸ್
ವಿಶೇಷ ಕಾಂಬಿನೇಷನ್!
ಭಾರತ ತಂಡ ಈ ಹಿಂದೆ ತಜ್ಞ ಬ್ಯಾಟರ್&ಬೌಲರ್ಗಳನ್ನೇ ನೆಚ್ಚಿಕೊಂಡಿತ್ತು. ಆದರೆ ಈಗ ಗೌತಮ್ ಗಂಭೀರ್ ಕೋಚ್ ಆದ ನಂತರ ಬೌಲಿಂಗ್ ಕೂಡ ಮಾಡಬಲ್ಲ ಬ್ಯಾಟರ್ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಭಾರತ ಗ್ವಾಲಿಯರ್ ಟಿ20 ಪಂದ್ಯದಲ್ಲಿ ಒಟ್ಟು 8 ಬ್ಯಾಟರ್ಸ್ ಮತ್ತು 9 ಬೌಲರ್ಗಳ ವಿಶೇಷ ಕಾಂಬಿನೇಷನ್ ರೂಪಿಸಿದಂತಾಗಿತ್ತು. ಮೂವರು (ಅರ್ಷದೀಪ್, ಮಯಾಂಕ್, ವರುಣ್ ಚಕ್ರವರ್ತಿ) ಜತೆಗೆ ಹಾರ್ದಿಕ್ ಪಾಂಡ್ಯ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಬೌಲಿಂಗ್ ಆಲ್ರೌಂಡರ್ಗಳಾಗಿದ್ದಾರೆ. ಇನ್ನು ಕೀಪರ್ ಸ್ಯಾಮ್ಸನ್ ಹೊರತಾಗಿ ಅಭಿಷೇಕ್ ಶರ್ಮ, ರಿಯಾನ್ ಪರಾಗ್, ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಕೂಡ ಅರೆಕಾಲಿಕ ಬೌಲರ್ಗಳಾಗಿ ನೆರವಾಗಬಲ್ಲವರಾಗಿದ್ದಾರೆ. ಹೀಗಾಗಿ, ಇಷ್ಟೊಂದು ಹೆಚ್ಚುವರಿ ಬೌಲಿಂಗ್ ಆಯ್ಕೆಗಳಿರುವುದು ನನಗೆ ಹೊಸ ತಲೆನೋವಾಗಿದೆ ಎಂದು ಸೂರ್ಯಕುಮಾರ್ ಮೊದಲ ಪಂದ್ಯದ ಬಳಿಕ ಹೇಳಿಕೊಂಡಿದ್ದರು.