ಏಕದಿನ ವಿಶ್ವಕಪ್ ಆತಿಥ್ಯದಿಂದ ಭಾರತದ ಆರ್ಥಿಕತೆಗೆ 11,637 ಕೋಟಿ ರೂ. ಲಾಭ!

web WC
Published on

ದುಬೈ: ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯು ಭಾರತದ ಆರ್ಥಿಕತೆಗೆ 11,637 ಕೋಟಿ ರೂ. (1.39 ಶತಕೋಟಿ ಡಾಲರ್​) ಕೊಡುಗೆ ನೀಡಿದೆ. ವಿಶ್ವಕಪ್​ ಆತಿಥ್ಯದಿಂದ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಅತ್ಯಧಿಕ ಲಾಭವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ (ಐಸಿಸಿ) ಬುಧವಾರ ತಿಳಿಸಿದೆ.

ವಿಶ್ವಕಪ್​ನಿಂದಾದ ಆರ್ಥಿಕ ಪ್ರಭಾವದ ಬಗ್ಗೆ ನೀಲ್ಸನ್​, ಐಸಿಸಿಗಾಗಿ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಇದರನ್ವಯ, ಕಳೆದ ಅಕ್ಟೋಬರ್​&ನವೆಂಬರ್​ನಲ್ಲಿ ನಡೆದ ಟೂರ್ನಿಯು "ಅತಿದೊಡ್ಡ ಏಕದಿನ ವಿಶ್ವಕಪ್​' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕ್ರಿಕೆಟ್​ ಆಟದ ಆರ್ಥಿಕ ಶಕ್ತಿಯನ್ನು ಏಕದಿನ ವಿಶ್ವಕಪ್​ ಟೂರ್ನಿಯು ಪ್ರದರ್ಶಿಸಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್​ೆ ಅಲ್ಲಾರ್ಡೈಸ್​ ತಿಳಿಸಿದ್ದಾರೆ. ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಅಜೇಯವಾಗಿ ಫೈನಲ್​ಗೇರಿದ್ದರೂ, ಆಸ್ಟ್ರೆಲಿಯಾ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿತ್ತು.

ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಿದ ನಗರಗಳಲ್ಲಿ ಪ್ರವಾಸೋದ್ಯಮದಿಂದ 7,234 ಕೋಟಿ ರೂ. ಆದಾಯ ಸಂಪಾದನೆಯಾಗಿದೆ. ಇದರಲ್ಲಿ ವಸತಿ, ಪ್ರಯಾಣ, ಸಾರಿಗೆ, ಆಹಾರ ಮತ್ತು ಪಾನೀಯಗಳ ಮೂಲಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಂದ ಬಂದ ಆದಾಯಗಳು ಸೇರಿವೆ ಎಂದು ಐಸಿಸಿ ತಿಳಿಸಿದೆ.

ಟೂರ್ನಿಯ 48 ಪಂದ್ಯಗಳಿಗೆ ಒಟ್ಟಾರೆ 12.50 ಲಕ್ಷ ಪ್ರೇಕ್ಷಕರು ಹಾಜರಾಗಿದ್ದರು. ಈ ಪೈಕಿ ಶೇ. 75ರಷ್ಟು ಮಂದಿ ಏಕದಿನ ಪಂದ್ಯವೊಂದಕ್ಕೆ ಮೊಟ್ಟಮೊದಲ ಬಾರಿಗೆ ಹಾಜರಾದವರಿದ್ದರು. ವಿಶ್ವಕಪ್​ ವೇಳೆ ಸುಮಾರು 48 ಸಾವಿರ ಜನರಿಗೆ ಪೂರ್ಣ ಮತ್ತು ಅರೆಕಾಲಿಕ ಉದ್ಯೋಗ ಸೃಷ್ಟಿಯಾಗಿತ್ತು. ಅವರು ಟೂರ್ನಿಯ ವೇಳೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒಳಗೊಂಡಿದ್ದರು ಎಂದು ವರದಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net