

ಬೆಂಗಳೂರು: ಜಗತ್ತಿನ ಮೊದಲ ನೈಟ್ ಮ್ಯಾರಥಾನ್ ಎಂಬ ಖ್ಯಾತಿ ಪಡೆದಿರುವ ಫೋನ್ಪೇ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ) ಇದೀಗ ೧೭ನೇ ಆವೃತ್ತಿಗೆ ಕಾಲಿಟ್ಟಿದ್ದು, 2024ರ ಬಿಎಂಎಂಗೆ ಸೆಪ್ಟೆಂಬರ್ 23ರಿಂದ ನೋಂದಣಿ ಆರಂಭಗೊಂಡಿದೆ. ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್ಸ್ ಮತ್ತು ಡಿಸ್ಟೆನ್ಸ್ ರೇಸಸ್ನ (ಎಐಎಂಎಸ್) ಸದಸ್ಯನಾಗಿರುವ ಬಿಎಂಎಂ ಕಳೆದ ೧೬ ಆವೃತ್ತಿಗಳಲ್ಲಿ ಜಗತ್ತಿನ ಪ್ರತಿಷ್ಠಿತ ಮ್ಯಾರಥಾನ್ ಆಗಿ ಪ್ರಸಿದ್ಧಿ ಪಡೆದಿದ್ದು, ಈಗ 12,000ಕ್ಕೂ ಹೆಚ್ಚು ಓಟಗಾರರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ಆಯೋಜನೆಗೊಳ್ಳುತ್ತಿದೆ.
ಈ ವರ್ಷದ ಬಿಎಂಎಂಗೆ `ರನ್ ಫಾರ್ ಸೇಫ್ ಸಿಟಿ’ (ಸುರಕ್ಷಿತ ನಗರಕ್ಕಾಗಿ ಓಟ) ಎಂಬ ಥೀಮ್ ನಿಗದಿಪಡಿಸಲಾಗಿದೆ. ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) 2024ರ ಡಿಸೆಂಬರ್ 14 ರ ಶನಿವಾರ ವೈಟ್ಫೀಲ್ಡ್ನ ಕೆಟಿಪಿಒದಲ್ಲಿ ಆಯೋಜಿಸಿರುವ ಈ ಬಾರಿಯ ಸ್ಪರ್ಧೆಗಳಲ್ಲಿ ಸಾವಿರಾರು ಓಟಗಾರರು, ಅಥ್ಲೀಟ್ಗಳು, ಕಾರ್ಪೊರೇಟ್ಗಳು ಹಾಗೂ ಎನ್ಜಿಒಗಳು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ww.midnightmarathon.in ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಬಾರಿ 31.6ಕೆ ಓಟವನ್ನು ಹೊಸತಾಗಿ ಸೇರ್ಪಡೆ ಮಾಡಲಾಗಿದೆ. ಜೊತೆಗೆ ಹಾಫ್ ಮ್ಯಾರಥಾನ್, ೧೦ಕೆ ಓಟ, 5ಕೆ ಫನ್ ರನ್ ಹಾಗೂ ವೇಗದ 5ಕೆ ಓಟಗಳಿರಲಿವೆ.
ಈ ಕುರಿತು ಮಾಹಿತಿ ನೀಡಿರುವ ಬಿಎಂಎಂ 2024ರ ಚೇರ್ಮನ್ ರಿತೇಶ್ ಬಿಂದಾಲ್, `ಆರ್ಬಿಐಟಿಸಿಯ ಫೋನ್ಪೇ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಈಗ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಓಟಗಾರರ ಸಂಖ್ಯೆ ವೃದ್ಧಿಸುತ್ತಿದೆ. ಈ ಬಾರಿ ಹೊಸತಾಗಿ ೩೧.೬ಕೆ ಓಟ ಸೇರಿಸಿದ್ದೇವೆ. ಇದು ಹಾಫ್ ಮ್ಯಾರಥಾನ್ ಓಟಗಾರರಿಗೆ ಫುಲ್ ಮ್ಯಾರಥಾನ್ ಓಟಗಾರರಾಗಿ ಅನುಭವ ಗಳಿಸಲು ನೆರವಾಗಲಿದೆ. ದೇಶದಲ್ಲಿ ಇಂದು 1600ಕ್ಕೂ ಹೆಚ್ಚು ಓಟದ ಸ್ಪರ್ಧೆಗಳು ನಡೆಯುತ್ತಿದ್ದು, ಕ್ರಿಕೆಟ್ ಬಳಿಕ ಅತಿಹೆಚ್ಚು ಪ್ರಾಯೋಜಕತ್ವ ಓಟದ ಸ್ಪರ್ಧೆಗಳಿಗೆ ಲಭಿಸುತ್ತಿದೆ. ದೇಶದಾದ್ಯಂತ ಪ್ರತಿ ವರ್ಷ 25 ಲಕ್ಷಕ್ಕೂ ಹೆಚ್ಚು ಓಟಗಾರರು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಎಂಎಂ ಇಂದು 21 ದೇಶಗಳಿಂದ ಓಟಗಾರರನ್ನು ಆಕರ್ಷಿಸುತ್ತಿದೆ’ ಎಂದು ಹೇಳಿದ್ದಾರೆ.
2009ರಲ್ಲಿ ಆರಂಭವಾದ ಬಿಎಂಎಂ ಓಟವು ರೋಟರಿ ಸಂಸ್ಥೆಯ ಸಾಮಾಜಿಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ನಿಧಿ ಸಂಗ್ರಹಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಳೆದ 16 ವರ್ಷಗಳಲ್ಲಿ ಬಿಎಂಎಂ ಮೂಲಕ 25 ಕೋಟಿ ರೂಪಾಯಿಗೂ ಹೆಚ್ಚು ನಿಧಿ ಸಂಗ್ರಹಿಸಿ ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಬಳಸಲಾಗಿದೆ. ಹೆಚ್ಚಿನ ಮಾಹಿತಿಗೆ ww.midnightmarathon.in ವೆಬ್ಸೈಟ್ ನೋಡಬಹುದು.
ಬಿಎಂಎಂ 2024ರ ಟೈಮ್ ಟೇಬಲ್ ಇಂತಿದೆ: ಸ್ಪರ್ಧೆಯ ದಿನಾಂಕ ಡಿಸೆಂಬರ್ 14, 2024, ವೇಗದ 5ಕೆ ರನ್ (ಟೈಮ್ಡ್) ಸಂಜೆ 6.30, 5ಕೆ ಫನ್ ರನ್ (ನಾನ್-ಟೈಮ್ಡ್) ಸಂಜೆ 6.40, 10ಕೆ ರನ್ ರಾತ್ರಿ 8.30, ಫುಲ್ ಮ್ಯಾರಥಾನ್ ರಾತ್ರಿ 11, 21.6ಕೆ ರನ್ ರಾತ್ರಿ 11.10, ಹಾಫ್ ಮ್ಯಾರಥಾನ್ ರಾತ್ರಿ 11.25ಕ್ಕೆ ಆರಂಭಗೊಳ್ಳಲಿವೆ.