

ಬೆಂಗಳೂರು: ಡಿಸೆಂಬರ್ 9ರಂದು ಮುಂಬೈನಲ್ಲಿ ನಡೆಯಲಿರುವ 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ 104 ಭಾರತೀಯರು ಮತ್ತು 61 ವಿದೇಶೀಯರ ಸಹಿತ 165 ಮಹಿಳಾ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಟೂರ್ನಿಯಲ್ಲಿ ಆಡುವ 5 ತಂಡಗಳು ಈಗಾಗಲೆ 21 ವಿದೇಶೀಯರ ಸಹಿತ 60 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿದ್ದು, ಹರಾಜಿನಲ್ಲಿ 9 ವಿದೇಶಿಯರ ಸಹಿತ ಗರಿಷ್ಠ 30 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ.
ವೆಸ್ಟ್ ಇಂಡೀಸ್ ಆಲ್ರೌಂಡರ್ ಡಿಯೇಂಡ್ರಾ ಡಾಟಿನ್ ಮತ್ತು ಆಸ್ಟ್ರೆಲಿಯಾದ ವೇಗಿ ಕಿಮ್ ಗಾರ್ತ್ ಗರಿಷ್ಠ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಆಸ್ಟ್ರೆಲಿಯಾದ ಅನಾಬೆಲ್ ಸುದರ್ಲ್ಯಾಂಡ್, ಜಾರ್ಜಿಯಾ ವಾರ್ಹ್ಯಾಮ್, ದಣ ಆಫ್ರಿಕಾದ ವೇಗಿ ಶಬ್ನಿಮ್ ಇಸ್ಮಾಯಿಲ್, ಇಂಗ್ಲೆಂಡ್ ವಿಕೆಟ್ ಕೀಪರ್ ಆಮಿ ಜೋನ್ಸ್ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಹರಾಜಿನಲ್ಲಿ ಗುಜರಾತ್ ಜೈಂಟ್ಸ್ಗೆ ಗರಿಷ್ಠ 10 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ಜತೆಗೆ ಗರಿಷ್ಠ 5.95 ಕೋಟಿ ರೂ. ಬಜೆಟ್ ಹೊಂದಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2.1 ಕೋಟಿ ರೂ. ಬಜೆಟ್ ಉಳಿಸಿಕೊಂಡಿದ್ದು, ಗರಿಷ್ಠ 5 ಆಟಗಾರ್ತಿಯರು ಬೇಕಿದೆ.
ಹಾಲಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ 2.25 ಕೋಟಿ ಬಜೆಟ್ ಹೊಂದಿದ್ದು, 3 ಆಟಗಾರ್ತಿಯರಷ್ಟೇ ಬೇಕಿದೆ. ಆರ್ಸಿಬಿ ತಂಡ 3.35 ಕೋಟಿ ರೂ. ಬಜೆಟ್ ಉಳಿಸಿಕೊಂಡಿದ್ದು, ಗರಿಷ್ಠ 7 ಆಟಗಾರರ ಖರೀದಿಗೆ ಅವಕಾಶವಿದೆ. ಯುಪಿ ವಾರಿಯರ್ಸ್ ಬಳಿ 4 ಕೋಟಿ ರೂ. ಬಜೆಟ್ ಇದ್ದು, 5 ಆಟಗಾರ್ತಿಯರು ಬೇಕಿದೆ.
ಕಣದಲ್ಲಿದ್ದಾರೆ 7 ಕನ್ನಡತಿಯರು
ಡಬ್ಲ್ಯುಪಿಎಲ್ ಹರಾಜಿನಲ್ಲಿ ರಾಜ್ಯದ 7 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಈ ಬಾರಿ 30 ಲಕ್ಷ ರೂ. ಮೂಲಬೆಲೆಯೊಂದಿಗೆ ಅದೃಷ್ಟ ಪರೀಸಲಿದ್ದಾರೆ. ಕಳೆದ ಬಾರಿ ಹರಾಜಿನಲ್ಲಿ ಅವರು ಯಾವುದೇ ತಂಡಕ್ಕೆ ಸೇಲಾಗಿರಲಿಲ್ಲ. ಪ್ರತ್ಯುಷಾ ಸಿ. ಕೂಡ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ವೃಂದಾ ದಿನೇಶ್, ಜಿ. ದಿವ್ಯಾ, ರಾಮೇಶ್ವರಿ ಗಾಯಕ್ವಾಡ್, ಸಹನಾ ಪವಾರ್, ಮಿಥಿಲಾ ವಿನೋದ್ (ಮೂಲಬೆಲೆ 10 ಲಕ್ಷ ರೂ) ಹರಾಜಿನಲ್ಲಿರುವ ಇತರ ಕನ್ನಡತಿಯರು.