13 ನೇ ಆವೃತ್ತಿಯ ಬಿಸಿಐಸಿ ಕಾರ್ಪೊರೇಟ್ ಗಾಲ್ಫ್ ಟೂರ್ನಿಯಲ್ಲಿ ಮಿಲೇಶ್​, ಅನುಪಮಾಗೆ ಪ್ರಶಸ್ತಿ

web kga
Published on

ಬೆಂಗಳೂರು: ಕೆಜಿಎ ಗಾಲ್ಫ್ ಕೋರ್ಸ್​ನಲ್ಲಿ ನಡೆದ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆಂಡ್​ ಕಾಮರ್ಸ್​ನ (ಬಿಸಿಐಸಿ) 13ನೇ ಆವೃತ್ತಿಯ ಸ್ಪರ್ಧೆ ಮುಕ್ತಾಯಗೊಂಡಿದ್ದು, ಇದರಲ್ಲಿ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕಾರ್ಯತಂತ್ರ ಮತ್ತು ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಮಿಲೇಶ್ ಜೆ ಅವರು ಸ್ಟ್ರೋಕ್ ಪ್ಲೇ ಅವಾರ್ಡ್ ಹಾಗೂ ಎವಿಎಸ್ ಅಡ್ವಟೈರ್ಸ್​ನ ಒಡತಿ ಅನುಪಮಾ ವಿ. ಅವರು ಅತ್ಯುತ್ತಮ ಮಹಿಳಾ ಗಾಲ್ಫರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ(ಕೆಎಸ್‌ಆರ್‌ಪಿ) ಹೆಚ್ಚುವರಿ ಪ್ರಧಾನ ನಿರ್ದೇಶಕ(ಎಜಿಡಿಪಿ) ಉಮೇಶ್‌ಕುಮಾರ್ ಐಪಿಎಸ್ ಅವರು ನೆಟ್ ಸ್ಟ್ರೋಕ್ ಪ್ಲೇ- ಹ್ಯಾಂಡಿಕ್ಯಾಪ್ 0-12 ರನ್ನರ್ ಅಪ್ ಪ್ರಶಸ್ತಿ ವಿಜೇತರಾದರು.

ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ(ಕೆಎಸ್‌ಆರ್‌ಪಿ) ಹೆಚ್ಚುವರಿ ಪ್ರಧಾನ ನಿರ್ದೇಶಕ(ಎಜಿಡಿಪಿ) ಉಮೇಶ್‌ಕುಮಾರ್ ಐಪಿಎಸ್; ಭಾರತ ಸರ್ಕಾರದ ಕಾಫೀ ಬೋರ್ಡ್​ ಕಾರ್ಯದರ್ಶಿ ಡಾ. ಜಗದೀಶ ಕೆ. ಜಿ. ಐಎಎಸ್ ಅವರು ಗೌರವ ಅತಿಥಿಗಳಾಗಿದ್ದರು. ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದು, ಟೂರ್ನಿ ಉದ್ಘಾಟಿಸಿದರು.

'2010ರಲ್ಲಿ ಸ್ಥಾಪನೆಯಾದಾಗಿನಿಂದ ಈ ಟೂರ್ನಿ, ದೇಶದಲ್ಲಿ ಕಾರ್ಪೊರೇಟ್ ಗಾಲ್ಫ್ ಕಾರ್ಯಕ್ರಮಗಳಿಗೆ ಹೆಗ್ಗರುತಾಗಿದೆ. ಜೊತೆಗೆ ವಾರ್ಷಿಕವಾಗಿ ಅಡೆತಡೆಯಿಲ್ಲದೆ ಸತತವಾಗಿ ಯಾವುದೇ ಛೇಂಬರ್ ನಡೆಸಿದ ಟೂರ್ನಿ ದೇಶದಲ್ಲಿ ಖ್ಯಾತಿ ಗಳಿಸಿದೆ. ಮೆಸರ್ಸ್ ಜೆಎಸ್‌ಡಬ್ಲ್ಯು ಸ್ಟೀಲ್, ಕರ್ನಾಟಕದ ಹಲವಾರು ಮುಂಚೂಣಿಯ ಕಾರ್ಪೊರೇಟ್ ಸಂಸ್ಥೆಗಳು, ಕರ್ನಾಟಕ ಸರ್ಕಾರ, ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ಗಳು ಈ 2024ರ ಆವೃತ್ತಿಯ ಟೂರ್ನಿಗೆ ಬೆಂಬಲ ನೀಡಿವೆ. ವ್ಯಾಪಾರ ವ್ಯವಹಾರ ಸಮುದಾಯ, ನಾಗರಿಕ ಸೇವೆ ಮತ್ತು ಟ್ರೇಡ್ ಕಮೀಷನ್‌ಗಳ 200ಕ್ಕೂ ಹೆಚ್ಚಿನ ಸ್ಪರ್ಧಿಗಳು ಒಂದಾಗಿ ಈ ಯಶಸ್ವಿ ಟೂರ್ನಿಯಲ್ಲಿ ಒಂದುಗೂಡಿದ್ದರಲ್ಲದೆ, ಸ್ನೇಹಪೂರ್ವಕ ಸ್ಪರ್ಧೆ ಮತ್ತು ಸಂಪರ್ಕ ಸೃಷ್ಟಿಯ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ತಮ್ಮ ಗಾಲ್ಫ್ ಕೌಶಲ್ಯಗಳನ್ನು ಪ್ರದರ್ಶಿಸಲು ಭಾಗವಹಿಸಿದವರಿಗೆ ಈ ಕಾರ್ಯಕ್ರಮ ಉತ್ಕೃಷ್ಟ ಅವಕಾಶ ನೀಡಿತ್ತು. ಜೊತೆಗೆ ಅವರು ವಿವಿಧ ಕ್ಷೇತ್ರಗಳಲ್ಲಿ ಸಂಪರ್ಕ ಬೆಳೆಸಿಕೊಂಡು ಕ್ರೀಡಾ ಮನೋಭಾವದೊಂದಿಗೆ ದಿನವನ್ನು ಆನಂದಿಸಿದ್ದರು' ಎಂದು ಬಿಸಿಐಸಿಯ ಅಧ್ಯಕ್ಷ ಡಾ. ಎಸ್. ದೇವರಾಜನ್ ಅವರು ಹೇಳಿದರು.

ವ್ಯವಹಾರ ವೃತ್ತಿಪರರು, ನಾಗರಿಕ ಸೇವೆಯಲ್ಲಿರುವವರು, ಗಣ್ಯ ವ್ಯಕ್ತಿಗಳು ಮತ್ತು ವಿದೇಶಿ ಮಾರಾಟ ಆಯುಕ್ತ ಅಧಿಕಾರಿಗಳಿಗೆ ಪರಸ್ಪರ ಸಂಪರ್ಕ ಸ್ಥಾಪಿಸಿಕೊಂಡು ಒಂದು ದಿನದ ಗಾಲ್ಫ್ ಆಟವನ್ನು ಆನಂದಿಸಲು ಬಿಸಿಐಸಿ ಕಾರ್ಪೋರೇಟ್ ಗಾಲ್ಫ್ ಟೂರ್ನಿ ಅನನ್ಯ ವೇದಿಕೆಯನ್ನು ಒದಗಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net