ಜಿಂಬಾಬ್ವೆ ಪ್ರವಾಸದ ಟಿ20 ಸರಣಿಗೆ ಶುಭಮಾನ್​ ಗಿಲ್​ ಸಾರಥ್ಯ; ಐಪಿಎಲ್​ನಲ್ಲಿ ಮಿಂಚಿದ ಯುವಕರಿಗೆ ಅವಕಾಶ!

web gill
Published on

ನವದೆಹಲಿ: ಟಿ20 ವಿಶ್ವಕಪ್​ ಬೆನ್ನಲ್ಲೇ ನಡೆಯಲಿರುವ ಭಾರತ ತಂಡದ ಜಿಂಬಾಬ್ವೆ ಪ್ರವಾಸದಿಂದ ಎಲ್ಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆರಂಭಿಕ ಶುಭಮಾನ್​ ಗಿಲ್​ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲಾಗಿದೆ. ಜತೆಗೆ ಐಪಿಎಲ್​ನಲ್ಲಿ ಮಿಂಚಿದ ಯುವ ಆಟಗಾರರಾದ ರಿಯಾನ್​ ಪರಾಗ್​, ಅಭಿಷೇಕ್​ ಶರ್ಮ, ನಿತೀಶ್​ ರೆಡ್ಡಿ ಮತ್ತು ತುಷಾರ್​ ದೇಶಪಾಂಡೆ ಇದೇ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಟಿ20 ವಿಶ್ವಕಪ್​ನಲ್ಲಿ ಆಡುತ್ತಿರುವ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​, ರವೀಂದ್ರ ಜಡೇಜಾ, ಜಸ್​ಪ್ರೀತ್​ ಬುಮ್ರಾ ಸಹಿತ ಎಲ್ಲ ಹಿರಿಯ ಆಟಗಾರರಿಗೆ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ವಿಶ್ವಕಪ್​ ತಂಡದಲ್ಲಿರುವ ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​ ಮತ್ತು ಮೀಸಲು ಆಟಗಾರರಾಗಿರುವ ರಿಂಕು ಸಿಂಗ್​ ಮತ್ತು ಖಲೀಲ್​ ಅಹ್ಮದ್​ ಮಾತ್ರ ಜಿಂಬಾಬ್ವೆಯಲ್ಲಿ ಆಡಲಿದ್ದಾರೆ.

ಶುಭಮಾನ್​ ಗಿಲ್​ ಮತ್ತು ಆವೇಶ್​ ಖಾನ್​ ಮೀಸಲು ಆಟಗಾರರಾಗಿ ಟಿ20 ವಿಶ್ವಕಪ್​ಗೆ ತೆರಳಿದ್ದರೂ, ಅಮೆರಿಕ ಚರಣದ ಬಳಿಕ ತವರಿಗೆ ಮರಳಿದ್ದರು. ಇದೀಗ ಇವರಿಬ್ಬರೂ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ನಾಯಕರಾಗಿದ್ದ ಗಿಲ್​, ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಸಂಜು ಸ್ಯಾಮ್ಸನ್​ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದರೆ, ಈಗಾಗಲೆ ಟೆಸ್ಟ್​ ಪದಾರ್ಪಣೆ ಮಾಡಿರುವ ಧ್ರುವ ಜುರೆಲ್​ 2ನೇ ವಿಕೆಟ್​ ಕೀಪರ್​ ಆಗಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಆಡದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ ಮತ್ತೆ ಸ್ಥಾನ ವಂಚಿತರಾಗಿದ್ದಾರೆ.

ಜುಲೈ 6ರಿಂದ ಸರಣಿ...

ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಜುಲೈ 6ರಿಂದ ನಡೆಯಲಿದೆ. ಜುಲೈ 7, 10, 13, 14ರಂದು ಇತರ 4 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಹರಾರೆಯಲ್ಲಿ ನಿಗದಿಯಾಗಿವೆ. ಎಲ್ಲ ಪಂದ್ಯಗಳು ರಾತ್ರಿ 8ರಿಂದ ನಡೆಯಲಿದ್ದು, ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ನಲ್ಲಿ ನೇರಪ್ರಸಾರ ಕಾಣಲಿವೆ.

ಲಕ್ಷ್ಮಣ್​ ಕೋಚ್​?

ಭಾರತ ತಂಡ ಜುಲೈ 1ರಂದು ಜಿಂಬಾಬ್ವೆಗೆ ತೆರಳುವ ನಿರೀಕ್ಷೆ ಇದೆ. ಹಾಲಿ ಕೋಚ್​ ರಾಹುಲ್​ ದ್ರಾವಿಡ್​ ಅವಧಿ ಟಿ20 ವಿಶ್ವಕಪ್​ನೊಂದಿಗೆ ಕೊನೆಗೊಳ್ಳುವುದರಿಂದ ಮತ್ತು ಹೊಸ ಕೋಚ್​ ಪಟ್ಟಕ್ಕೆ ಫೇವರಿಟ್​ ಎನಿಸಿರುವ ಗೌತಮ್​ ಗಂಭೀರ್​ ನೇಮಕಾತಿ ಇನ್ನೂ ಆಗದಿರುವುದರಿಂದ, ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​ ಭಾರತ ತಂಡದ ಹಂಗಾಮಿ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ತಿಲಕ್​, ವೈಶಾಕ್​ಗೆ ನಿರಾಸೆ

ಭಾರತ ಪರ ಈಗಾಗಲೆ 16 ಟಿ20 ಪಂದ್ಯ ಆಡಿರುವ ತಿಲಕ್​ ವರ್ಮ ಜಿಂಬಾಬ್ವೆ ವಿರುದ್ಧ ಸರಣಿಗೆ ಆಯ್ಕೆಯಾಗದಿರುವುದು ಅಚ್ಚರಿ ಎನಿಸಿದೆ. ಜತೆಗೆ ಕರ್ನಾಟಕದ ವೇಗಿ ವೈಶಾಕ್​ ವಿಜಯ್​ಕುಮಾರ್​ ಕೂಡ ಅವಕಾಶ ಪಡೆಯದೆ ನಿರಾಸೆ ಅನುಭವಿಸಿದ್ದಾರೆ. ತಿಲಕ್​ ವರ್ಮ ಕಳೆದ ಜನವರಿಯಲ್ಲಿ ಅ್ಘಾನಿಸ್ತಾನ ವಿರುದ್ಧ ಭಾರತ ಆಡಿದ ಕೊನೇ ಟಿ20 ಸರಣಿಗೆ ಭಾರತ ತಂಡದಲ್ಲಿದ್ದರೂ, ಐಪಿಎಲ್​ನಲ್ಲೂ ಮುಂಬೈ ಪರ 416 ರನ್​ ಗಳಿಸಿ ಮಿಂಚಿದ್ದರು. ಹರ್ಷಿತ್​ ರಾಣಾ, ಯಶ್​ ದಯಾಳ್​, ಮಯಾಂಕ್​ ಯಾದವ್​ ಮುಂತಾದ ಐಪಿಎಲ್​ ತಾರೆಯರೂ ಸ್ಥಾನ ಪಡೆದಿಲ್ಲ.

ಐಪಿಎಲ್​ ಸ್ಟಾರ್ಸ್​ಗೆ ಚಾನ್ಸ್​

ಐಪಿಎಲ್​ನಲ್ಲಿ ಸನ್​ರೈಸರ್ಸ್​ ಪರ ಆರಂಭಿಕರಾಗಿ ಆರ್ಭಟಿಸಿದ್ದ ಅಭಿಷೇಕ್​ ಶರ್ಮ 42 ಸಿಕ್ಸರ್​ ಸಹಿತ 484 ರನ್​ ಬಾರಿಸಿದ್ದರು. ರಿಯಾನ್​ ಪರಾಗ್​ ರಾಜಸ್ಥಾನ ಪರ 7 ಇನಿಂಗ್ಸ್​ಗಳಲ್ಲಿ 40 ಪ್ಲಸ್​ ರನ್​ ಬಾರಿಸಿದ್ದರು. ಜತೆಗೆ 16 ಇನಿಂಗ್ಸ್​ಗಳಲ್ಲಿ 573 ರನ್​ ಸಿಡಿಸಿದ್ದರು. 21 ವರ್ಷದ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ಸನ್​ರೈಸರ್ಸ್​ ಪರ 303 ರನ್​ ಮತ್ತು 3 ವಿಕೆಟ್​ ಗಳಿಸಿದ್ದರು. ವೇಗಿ ತುಷಾರ್​ ದೇಶಪಾಂಡೆ ಸಿಎಸ್​ಕೆ ಪರ 17 ವಿಕೆಟ್​ ಕಬಳಿಸಿದ್ದರು.

ಭಾರತ ತಂಡ: ಶುಭಮಾನ್​ ಗಿಲ್​ (ನಾಯಕ), ಯಶಸ್ವಿ ಜೈಸ್ವಾಲ್​, ಋತುರಾಜ್​ ಗಾಯಕ್ವಾಡ್​, ಅಭಿಷೇಕ್​ ಶರ್ಮ, ರಿಂಕು ಸಿಂಗ್​, ಸಂಜು ಸ್ಯಾಮ್ಸನ್​ (ವಿ.ಕೀ), ಧ್ರುವ ಜುರೆಲ್​ (ವಿ.ಕೀ), ನಿತೀಶ್​ ರೆಡ್ಡಿ, ರಿಯಾನ್​ ಪರಾಗ್​, ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ, ಆವೇಶ್​ ಖಾನ್​, ಖಲೀಲ್​ ಅಹ್ಮದ್​, ಮುಕೇಶ್​ ಕುಮಾರ್​, ತುಷಾರ್​ ದೇಶಪಾಂಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net