ಅಧ್ಯಾತ್ಮ-ಸಂಗೀತ ಒಂದೇ ನಾಣ್ಯದ ಎರಡು ಮುಖ

Bdk_Spiritual music
Published on

ಬದಿಯಡ್ಕ: ಭಗವಂತನನ್ನು ಒಲಿಸಿಕೊಳ್ಳುವ ವಿಧಾನಗಳಲ್ಲಿ ಸಂಗೀತವೂ ಒಂದು. ನಾದೋಪಾಸನೆ ಆಂತರಂಗಿಕವಾದ ಭಗವಂತನ ಭಾವಸ್ಫುರಣಕ್ಕೆ ಕಾರಣವಾಗುತ್ತದೆ. ಅಧ್ಯಾತ್ಮ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

ಶ್ರೀ ಎಡನೀರು ಮಠದ ಸಭಾಭವನದಲ್ಲಿ ಶುಕ್ರವಾರ ಉಡುಪಿಯ ಮಣಿ ಕೃಷ್ಣಸ್ವಾಮಿ ಅಕಾಡೆಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಗ ಸುಧಾರಸ ಸಂಗೀತೋತ್ಸವ-2024ರ ಎರಡನೇ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ-ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗಾಯನ ತಾತ್ವಿಕ ಅಂಶಗಳು, ಆಧ್ಯಾತ್ಮಿಕ ವಿಚಾರಗಳು ಜನರಿಗೆ ತಲುಪುವ ಮಾಧ್ಯಮವಾಗಿದೆ. ಜಗತ್ತು ಆಧುನಿಕತೆಯತ್ತ ಹೊರಳಿದರೂ ಪಾರಂಪರಿಕ ಸಂಗೀತದತ್ತ ಒಲವು ಕಡಿಮೆಯಾಗಿಲ್ಲ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಹರ್ನಿಶಿ ಸಂಗೀತ ಕಲಾರಾಧನೆ ಸ್ತುತ್ಯರ್ಹ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಾದ್ಯಂತ ಸಂಸ್ಥೆ ಹಮ್ಮಿಕೊಂಡಿರುವ ಸಂಗೀತ ಯಾತ್ರೆ ಹೊಸ ಆಯಾಮಗಳೊಂದಿಗೆ ಆಧ್ಯಾತ್ಮಿಕ, ಕಲಾ ಪ್ರಕಾರಗಳಿಗೆ ನವಚೇತನ ನೀಡುತ್ತದೆ ಎಂದರು.

ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಡಾ.ವಿ.ಅರವಿಂದ ಹೆಬ್ಬಾರ್ ಅವರಿಗೆ ಲಲಿತಕಲಾ ಪೋಷಕ ಮಣಿ ಪ್ರಶಸ್ತಿ ಪ್ರದಾನಗೈಯ್ಯಲಾಯಿತು. ಹಿರಿಯ ಸಂಗೀತ ವಿದುಷಿ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ ಅವರನ್ನು ಗೌರವಿಸಲಾಯಿತು.

ಡಾ.ನಾಗರತ್ನ ಹೆಬ್ಬಾರ್, ವಿದುಷಿ ಉಷಾ ಈಶ್ವರ ಭಟ್, ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ, ವಿದ್ವಾನ್ ಯೊಗೀಶ ಶರ್ಮಾ ಬಳ್ಳಪದವು, ವಿದ್ವಾನ್ ವಿಠ್ಠಲ ರಾಮಮೂರ್ತಿ ಚೆನ್ನೈ, ವಿದುಷಿ ಗೀತಾ ಸರಳಾಯ, ಚಂದ್ರಶೇಖರ ನಾವಡ, ವಿದ್ವಾನ್ ಉಳ್ಳಾಲ್ ಮೋಹನ ಕುಮಾರ್, ನಾಗೇಶ್ ಕೆ.ಬಪ್ಪನಾಡು ಉಪಸ್ಥಿತರಿದ್ದರು. ಅಕಾಡೆಮಿಯ ನಿತ್ಯಾನಂದ ರಾವ್ ನಿರೂಪಿಸಿ, ಸ್ವಾಗತಿಸಿದರು.

ಶಾಸ್ತ್ರೀಯ ಸಂಗೀತ ಕಛೇರಿ

ದಾಸವಾಣಿಯಲ್ಲಿ ಶಿವಾನಂದ ಡಿ.ಉಡುಪಿ ಅವರಿಂದ ಹಾಡುಗಾರಿಕೆ ನಡೆಯಿತು. ಸುರೇಶ್(ತಬಲಾ), ಜಂಬಣ್ಣ(ತಾಳ)ದಲ್ಲಿ ಸಹಕರಿಸಿದರು. ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಅನೀಶ್ ಭಟ್ ಪುತ್ತೂರು ಅವರಿಂದ ಹಾಡುಗಾರಿಕೆ ನಡೆಯಿತು. ಪಕ್ಕವಾದ್ಯದಲ್ಲಿ ವಿಠ್ಠಲ ರಾಮಮೂರ್ತಿ ಚೆನ್ನೈ(ವಯೋಲಿನ್), ಅನೂರು ಅನಂತಕೃಷ್ಣ ಶರ್ಮಾ, ಎನ್.ವಿದ್ಯಾಶಂಕರ್(ಮೃದಂಗ), ಪ್ರಣವ್ ಕಾತೀಕ (ಮೋರ್ಸಿಂಗ್)ನಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net