ದುರಸ್ತಿ ಕಾಣದ ಸಸ್ಪೇಟಿ-ಪಳನೀರು ರಸ್ತೆ

Ism_Election Ban
Published on

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದಲ್ಲಿ ಹಾದು ಹೋಗುವ ಸಸ್ಪೇಟಿ-ಪಳನೀರು ರಸ್ತೆ ದುರಸ್ತಿಗೊಳಿಸದಿರುವುದನ್ನು ಪ್ರತಿಭಟಿಸಿ ಆ ಭಾಗದ ಮತದಾರರು ಮಾಡ್ನೂರು 2ನೇ ವಾರ್ಡಿನ ತೆರವಾದ ಸ್ಥಾನಕ್ಕೆ ನ.23ರಂದು ನಡೆಯಲಿರುವ ಉಪ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತು ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿರುವ ಗ್ರಾಮಸ್ಥರು,‘ಸಸ್ಪೇಟಿ-ಪಳನೀರು ಹೋಗುವ ರಸ್ತೆ ದುರಸ್ತಿ ಮಾಡದಿರುವುದರಿಂದ ನ.23ರಂದು ನಡೆಯುವ ಅರಿಯಡ್ಕ ಗ್ರಾಪಂಯ ಮಾಡ್ನೂರು 2ನೇ ವಾರ್ಡಿನ ಚುನಾವಣೆಗೆ ಮತದಾನ ಮಾಡದಿರಲು ಊರಿನ ಮತದಾರರು ನಿರ್ಧರಿಸಿರುತ್ತೇವೆ-ಸೆಸ್ಪೇಟಿ-ಪಳನೀರು ಭಾಗದ ಮತದಾರರು’ ಎಂದು ಬ್ಯಾನರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಚಾರವೇ ಅಪಾಯಕಾರಿ: ಕಾವು ಅಶ್ವತ್ಥಡಿಯಿಂದ ಸಸ್ಪೇಟಿ-ಪಳನೀರು ಮೂಲಕವಾಗಿ ಈಶ್ವರಮಂಗಲ-ಪಳ್ಳತ್ತೂರು ಅಂತಾರಾಜ್ಯ ಸಂಪರ್ಕ ರಸ್ತೆಗೆ ಸಾಂತ್ಯದಲ್ಲಿ ಸಂಪರ್ಕ ಕಲ್ಪಿಸುವ ಸಸ್ಪೇಟಿ-ಪಳನೀರು ಹದಗೆಟ್ಟು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕೂಡ ಕಷ್ಟಕರ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ದ್ವಿಚಕ್ರ ವಾಹನ ರಸ್ತೆ ಹೊಂಡಕ್ಕೆ ಬಿದ್ದು ಪಲ್ಟಿಯಾಗಿ ಸವಾರರು ಗಾಯಗೊಂಡ ಘಟನೆ ನಡೆದಿದೆ. ವಾಹನಗಳು ಚಲಿಸುವ ವೇಳೆ ಚಕ್ರದಡಿಗೆ ಸಿಲುಕಿದ ಜಲ್ಲಿ ಕಲ್ಲುಗಳು ನಡೆದುಕೊಂಡು ಹೋಗುವ ಮಂದಿಯ ಮೇಲೆ ಎಸೆಯಲ್ಪಡುತ್ತಿದ್ದು, ಈ ರಸ್ತೆಯಲ್ಲಿನ ಸಂಚಾರವೇ ಅಪಾಯಕಾರಿಯಾಗಿದೆ ಎಂದು ಸಸ್ಪೇಟಿ-ಪಳನೀರು ಭಾಗದ ನಿವಾಸಿಗಳು ಆರೋಪಿಸಿದ್ದಾರೆ.

ಮನವಿಗೆ ಸಿಗದ ಸ್ಪಂದನೆ: ತೀರಾ ಹದಗೆಟ್ಟಿರುವ ಸಸ್ಪೇಟಿ-ಪಳನೀರು ರಸ್ತೆ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಕಳೆದ ಹತ್ತಾರು ವರ್ಷಗಳಿಂದ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರ ತನಕ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಯಾರ ಸ್ಪಂದನೆಯೂ ಸಿಕ್ಕಿಲ್ಲ ಎಂದು ಆರೋಪಿಸುತ್ತಿರುವ ಅಲ್ಲಿನ ನಿವಾಸಿಗಳು ಗ್ರಾಪಂ ಉಪಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮುಂದಿನ ದಿನಗಳಲ್ಲಿ ಈ ರಸ್ತೆಗೆ ಕಾಯಕಲ್ಪ ನೀಡುವ ವ್ಯಕ್ತಿ ಅಥವಾ ಪಕ್ಷವನ್ನು ಬೆಂಬಲಿಸುತ್ತೇವೆ. ರಸ್ತೆ ಅಭಿವೃದ್ಧಿ ಪಡಿಸಬೇಕೆಂಬ ನಮ್ಮ ಬೇಡಿಕೆಗೆ ಮನ್ನಣೆ ಸಿಗದಿದ್ದರೆ ಮುಂಬರುವ ಎಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಂದು ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net