ದೇಶಾದ್ಯಂತ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ: ನಾಳೆ ಸಂಜೆ ಸುದ್ದಿಗೋಷ್ಠಿ ಚುನಾವಣಾ ಆಯೋಗ ಘೋಷಣೆ| Election Commission

ವಿಜಯವಾಣಿ - 2025-10-26T194426.218
Published on

ನವದೆಹಲಿ: ದೇಶಾದ್ಯಂತ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು(Election Commission) ನಾಳೆ (ಅ. 27) ಸಂಜೆ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಲಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಇಂದು(ಅ. 26) ವರದಿ ಮಾಡಿದೆ.

ಸಂಪೂರ್ಣ ವಿವರಗಳನ್ನು ಇನ್ನೂ ಬಿಡುಗಡೆ ಮಾಡದಿದ್ದರೂ, ಚುನಾವಣಾ ಆಯೋಗವು SIR ನ ಮೊದಲ ಹಂತವನ್ನು ಘೋಷಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಸಮಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಹಾಯ ಮಾಡಲು ಚುನಾವಣಾ ಸಂಸ್ಥೆ ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಚುನಾವಣಾ ಆಯೋಗವು ದೆಹಲಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಬಿಹಾರದಲ್ಲಿನ ಅನುಭವದ ಆಧಾರದ ಮೇಲೆ ದೇಶಾದ್ಯಂತ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರವನ್ನು ನಾಳೆಯ ಸುದ್ದಿಗೋಷ್ಠಿಯಲ್ಲಿ ನೀಡುವ ಸಾಧ್ಯತೆ ಇದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net