

ನವದೆಹಲಿ: ಮಹಾರಾಷ್ಟ್ರದಲ್ಲಿ ಅತ್ಯಾಚಾರ ಮತ್ತು ಮಾನಸಿಕ ಕಿರುಕುಳದಿಂದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಡಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಇದೊಂದು ಸಾಂಸ್ಥಿಕ ಕೊಲೆ, ಬಿಜೆಪಿ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಭಾನುವಾರ(ಅ. 26) ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಮಹಾರಾಷ್ಟ್ರದ ಸತಾರಾದಲ್ಲಿ ಅತ್ಯಾಚಾರ ಮತ್ತು ಕಿರುಕುಳದಿಂದ ಹತಾಶೆಗೊಂಡ ವೈದ್ಯೆಯೊಬ್ಬರ ಆತ್ಮಹತ್ಯೆ, ಯಾವುದೇ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸುವ ದುರಂತ. ಇತರರ ನೋವನ್ನು ನಿವಾರಿಸಲು ಆಶಿಸಿದ ಭರವಸೆಯ ವೈದ್ಯೆಯ ಮಗಳು, ಭ್ರಷ್ಟ ವ್ಯವಸ್ಥೆ ಮತ್ತು ಅಧಿಕಾರ ರಚನೆಯಲ್ಲಿ ಬೇರೂರಿರುವ ಅಪರಾಧಿಗಳ ಕಿರುಕುಳಕ್ಕೆ ಬಲಿಯಾದಳು ಎಂದು ಹೇಳಿದ್ದಾರೆ.
ಅಪರಾಧಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಆಕೆಯ ಮೇಲೆ ಘೋರ ಅಪರಾಧವನ್ನು ಎಸಗಿದ್ದಾರೆ. ಬಿಜೆಪಿ ಜೊತೆ ಸಂಬಂಧ ಹೊಂದಿರುವ ಕೆಲವು ಪ್ರಭಾವಿಗಳು ಆಕೆಯ ಮೇಲೆ ಭ್ರಷ್ಡಾಚಾರ ಮಾಡಲು ಒತ್ತಡ ಹೇರಿದ್ದಾರೆ. ಇದು ಆತ್ಮಹತ್ಯೆಯಲ್ಲಿ, ಇದೊಂದು ಸಾಂಸ್ಥಿಕ ಕೊಲೆ. ಅಧಿಕಾರವು ಅಪರಾಧಿಗಳಿಗೆ ಗುರಾಣಿಯಾದಾಗ ಯಾರಿಂದ ನ್ಯಾಯವನ್ನು ನಿರೀಕ್ಷಿಸಬಹುದು? ಡಾ. ಸಂಪದ ಅವರ ಸಾವು ಈ ಬಿಜೆಪಿ ಸರ್ಕಾರದ ಅಮಾನವೀಯ ಮತ್ತು ಸಂವೇದನಾರಹಿತ ಮುಖವನ್ನು ಬಹಿರಂಗಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾವು ಬಲಿಪಶುವಿನ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಭಾರತದ ಪ್ರತಿಯೊಬ್ಬ ಮಗಳಿಗೂ ಇನ್ನು ಮುಂದೆ ಭಯವಿಲ್ಲ, ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯೆ ಮಧ್ಯ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆಯವರಾಗಿದ್ದು, ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಫಾಲ್ಟನ್ ಪಟ್ಟಣದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನ್ನ ಅಂಗೈಯಲ್ಲಿ ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಬದನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಬಂಕರ್ ತನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸತಾರಾ ಜಿಲ್ಲೆಯ ಫಾಲ್ಟನ್ ಪೊಲೀಸ್ ಠಾಣೆಯಲ್ಲು ಇಬ್ಬರ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣ ದಾಖಲಾಗಿತ್ತು.(ಏಜೆನ್ಸೀಸ್)