

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಫಲಪ್ರದವಾಗುವಲ್ಲಿಯೇ ವ್ಯಕ್ತಿ, ಲೋಕದ ಹಿತವಡಗಿದೆ. ಆ ಕಾಳಜಿಯಿಂದ ಕಾರ್ಯನಿರ್ವಹಿಸುವಲ್ಲಿಯೇ ನಮ್ಮ ಜೀವನದ ಸಾರ್ಥಕ್ಯವಿದೆ. ಕಲಾರಾಧನೆ ಎಂದರೆ ದೇವತಾರಾಧನೆ ಎಂದೇ ಬಗೆದು ಅದರಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ವಿಶ್ವಕರ್ಮ ಸಮಾಜ, ಈ ದೇವಸ್ಥಾನದವರು, ಸಮಿತಿಯವರು ಈ ಸತ್ಸಂಪ್ರದಾಯ ಬಿಡದೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಹೇಳಿದರು.
ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪುಷ್ಪ್ಪಪೂಜೆ ಅಂಗವಾಗಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ 27ನೇ ವಷರ್ದ ಕಾರ್ಯಕ್ರಮವಾಗಿ ಸಂಯೋಜಿಸಲಾದ ತಾಳಮದ್ದಳೆ ಪೂರ್ವಭಾವಿಯಾಗಿ ವಿದ್ಯಾರ್ಥಿವೇತನ, ಮಳೆಹಾನಿ ಸಂತ್ರಸ್ತರಿಗೆ ಧನಸಹಾಯ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ದೇವಸ್ಥಾನ ಆಡಳಿತ ಮೊಕ್ತೇಸರ, ಪುರೋಹಿತ ಎನ್.ಜಯಕರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನ ಮೊಕ್ತೇಸರರಾದ ಎಂ.ಕೆ.ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಪಾಸಾಗಿ ಶಿಕ್ಷಣ ಮುಂದುವರಿಸುತ್ತಿರುವ ಸಮಾಜದ 11 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸದಸ್ಯ ವಿಕ್ರಂ ನಾರಂಪಾಡಿ ಮತ್ತು ರೇವತಿ ಗುಂಡ್ಯಡ್ಕ ಅವರ ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದ್ದು, ಧನ ಸಹಾಯ ವಿತರಿಸಲಾಯಿತು. ಬೇಲಾಡಿ ಜಗದೀಶ ಆಚಾರ್ಯ ನಿರೂಪಿಸಿದರು. ಬಳಿಕ ‘ಗದಾಯುದ್ಧ ’ಯಕ್ಷಗಾನ ತಾಳಮದ್ದಳೆ ಜರುಗಿತು.