

ಮಂಗಳೂರು : ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ, ಸಂಘದ ಅಧ್ಯಕ್ಷ ಜೈರಾಜ್ ಬಿ.ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಉರ್ವ ಚರ್ಚ್ ಹಾಲ್‌ನಲ್ಲಿ ನಡೆಯಿತು.ಸಂಘವು 2023-24ನೇ ಸಾಲಿನಲ್ಲಿ 12.01 ಕೋಟಿ ರೂ.ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಯಿತು.
ಸಂಘದ ಅಧ್ಯಕ್ಷ ಜೈರಾಜ್ ಬಿ. ರೈ ಮಾತನಾಡಿ ‘ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ವ್ಯವಹಾರ ಸಾರ್ವಕಾಲಿಕ ದಾಖಲೆಯ 151 ಕೋಟಿ ವೃದ್ಧಿಯಾಗಿದೆ. ಸಂಘವು 2024ರ ಮಾರ್ಚ್ ಅಂತ್ಯಕ್ಕೆ 533 ಕೋಟಿ ರೂ.ಠೇವಣಾತಿ, 453 ಕೋಟಿ ರೂ. ಸಾಲ ನೀಡಲಾಗಿದ್ದು, 986 ಕೋಟಿ ಮೀರಿದ ಒಟ್ಟು ವ್ಯವಹಾರ ಹಾಗೂ12.01 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಒಟ್ಟು 3974 ಕೋಟಿ ರೂ. ವಹಿವಾಟು ನಡೆಸಿದೆ. ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. 0.07ಗೆ ಸೀಮಿತವಾಗಿದ್ದು, ಕಳೆದ 17 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ ಎಂದರು.
ಸಂಘದ ಕೇಂದ್ರ ಕಚೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು ಮಾರ್ಚ್ 2025ರೊಳಗೆ ಪೂರ್ಣವಾಗಲಿದೆ. ಪ್ರಸ್ತುತ ಸಾಲಿನಲ್ಲಿ 5 ಹೊಸ ಶಾಖೆಗಳನ್ನು ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ 534 ಕೋಟಿ ರೂ. ಠೇವಣಿ, ಹೊರಬಾಕಿ ಸಾಲ 474 ಕೋಟಿ ರೂ. ಹಾಗೂ ಒಟ್ಟು ವ್ಯವಹಾರ 1008 ಕೋಟಿ ರೂ. ಮೀರಿದ್ದು ತನ್ನ ವಿಶನ್ 2025ರ 1,000 ಕೋಟಿ ರೂ. ಒಟ್ಟು ವ್ಯವಹಾರದ ಗುರಿಯನ್ನು 2024-25ರ ಸಾಲಿನ ಮೊದಲ ತ್ರೈಮಾಸಿಕ ಅವಧಿ 30.06.2024ರೊಳಗೆ ಸಾಧಿಸಿರುವುದು ಹೆಮ್ಮೆಯ ವಿಷಯ ಎಂದು ಜೈರಾಜ್ ಬಿ. ರೈ ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಜಯಪಾಲ ಶೆಟ್ಟಿ, ನಿರ್ದೇಶಕರಾದ ಎ.ರತ್ನಕಾಂತಿ ಶೆಟ್ಟಿ, ಡಾ ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ.ಎಸ್. ಅಡ್ಯಂತಾಯ, ವಿಠಲ ಪಿ. ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಎಂ.ಸುಧಾಕರ ಶೆಟ್ಟಿ , ಅರಿಯಡ್ಕ ಚಿಕ್ಕಪ್ಪ ನಾಕ್ ಉಪಸ್ಥಿತರಿದ್ದರು.
ಮಹಾ ಪ್ರಬಂಧಕ ಗಣೇಶ್ ಜಿ. ಕೆ. ಅವರು ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿಂಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಿಸಿದರು. 2023-24ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು. ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿ, ಎಂ.ರಾಮಯ ಶೆಟ್ಟಿ ವಂದಿಸಿದರು. ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.