ಮನೆಯಲ್ಲೇ ಶವವಾಗಿ ಪತ್ತೆಯಾದ ಎಸ್‌ಪಿ; ಅಸಹಜ ಸಾವು ಪ್ರಕರಣ ದಾಖಲು..

SP
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಎಸ್‌ಪಿ ಶೋಭಾ ಕಟಾವ್ಕರ್ (53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಶೋಭಾ ಕಟಾವ್ಕರ್, ಪುತ್ರನ ಜತೆಗೆ ನೆಲೆಸಿದ್ದರು. ಶುಕ್ರವಾರ ಪುತ್ರ ನಾಮದೇವ್ ತನ್ನ ಕುಟುಂಬದ ಜತೆಗೆ ಹಾಸನಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ತಾಯಿ ಶೋಭಾಗೆ ಮಗ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಕಾರಣ ಸೆಕ್ಯೂರಿಟಿ ಗಾರ್ಡ್‌ಗೆ ಪುತ್ರ ವಿಷಯ ತಿಳಿಸಿದ್ದಾರೆ. ಕಾವಲುಗಾರ ಒಳಗೆ ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.

ಮೇಲ್ನೋಟಕ್ಕೆ ಹೃದಯಾಘಾತ ಎಂದು ಗೊತ್ತಾಗಿದೆ. ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹಾಸನದಿಂದ ಪುತ್ರ ವಾಪಸ್ ಬಂದ ಮೇಲೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1990ರಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಪತಿ ಮೃತಪಟ್ಟ ಮೇಲೆ ಅನುಕಂಪದ ಆಧಾರದ ಮೇಲೆ ಶೋಭಾಗೆ ಎಸ್‌ಐ ಹುದ್ದೆ ನೀಡಲಾಗಿತ್ತು. ಬೆಂಗಳೂರು ನಗರ ವಿಶೇಷ ವಿಭಾಗದಲ್ಲಿ ಎಸಿಪಿಯಾಗಿದ್ದ ಶೋಭಾ, ಇತ್ತೀಚೆಗೆ ಎಸ್‌ಪಿಯಾಗಿ ಬಡ್ತಿ ಪಡೆದಿದ್ದರು.

ಕೆಲ ದಿನಗಳ ಹಿಂದೆ ಸಹೋದ್ಯೋಗಿಗಳು ಬೀಳ್ಕೋಡುಗೆ ನೀಡಿದ್ದರು. ಮೂಲತಃ ಹುಬ್ಬಳ್ಳಿಯವರಾಗಿದ್ದ ಕಾರಣ ಹೆಸ್ಕಾಂ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದರು. ಸೋಮವಾರ ಹುಬ್ಬಳಿಗೆ ಹೋಗಲು ನಿರ್ಧರಿಸಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net