

ಮುಂಬೈ: ಲೈವ್ ಸ್ಟ್ರೀಮಿಂಗ್ ಮಾಡುವ ವೇಳೆ ದಕ್ಷಿಣ ಕೊರಿಯಾ ಮೂಲದ ಮಹಿಳಾ ಯೂಟ್ಯೂಬರ್ಗೆ ಕಿರುಕುಳ ನೀಡಿದ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ (ನ.30) ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಸಹ ವ್ಯಕ್ತವಾಗಿದೆ.
ಮುಂಬೈ ಬೀದಿಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಕೊರಿಯಾ ಯುವತಿಯ ಬಳಿ ಬಂದ ಯುವಕನೊಬ್ಬ ಆಕೆ ವಿರೋಧಿಸಿದರೂ ಕೈಹಿಡಿದುಕೊಳ್ಳುತ್ತಾನೆ. ಬಳಿಕ ಬೈಕ್ ಮೇಲೆ ಏರುವಂತೆ ಒತ್ತಾಯ ಮಾಡುತ್ತಾನೆ. ಎಲ್ಲಿಗೆ ಎಂದು ಪ್ರಶ್ನಿಸುತ್ತಾಳೆ. ಬಳಿಕ ನನ್ನ ಡ್ರೆಸ್ ಸರಿಯಿಲ್ಲ ನಾಳೆ ಬರುತ್ತೇನೆ ಎಂದು ಹೇಳುತ್ತಾಳೆ. ನಂತರ ಯುವಕ ಆಕೆಯ ತಲೆ ಹಿಡಿದು ಮುತ್ತು ಕೊಡಲು ಯತ್ನಿಸುತ್ತಾನೆ. ಈ ವೇಳೆ ಆಕೆ ಹೇಗೋ ಉಪಾಯದಿಂದ ಬಿಡಿಸಿಕೊಳ್ಳುತ್ತಾಳೆ.
ಇಷ್ಟಕ್ಕೆ ಸುಮ್ಮನಾಗದ ಯುವಕರು ಕೊರಿಯಾ ಯುವತಿ ನಡೆದು ಹೋಗುವಾಗ ಹಿಂಬಾಲಿಸಿಕೊಂಡು ಬಂದು ಬೈಕ್ ಮೇಲೆ ಕೂರುವಂತೆ ಕೇಳುತ್ತಾರೆ. ಬಳಿಕ ಅವರ ಕೈಯಿಂದ ತಪ್ಪಿಸಿಕೊಂಡು ಕೊರಿಯಾ ಯುವತಿ ಮನೆ ಸೇರಿಕೊಳ್ಳುತ್ತಾಳೆ. ಇದಿಷ್ಟು ಘಟನೆ ಸಾವಿರಾರು ಜನರ ಮುಂದೆಯೇ ನಡೆದಿದೆ. ದೂರದ ಊರಿನಿಂದ ಭಾರತಕ್ಕೆ ಬಂದ ಅತಿಥಿಯನ್ನು ಈ ರೀತಿನಾ ನಡೆಸಿಕೊಳ್ಳೋದು ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಯುವಕರಿಬ್ಬರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಅಂದಹಾಗೆ ಸಂತ್ರಸ್ತ ಕೊರಿಯಾ ಯುವತಿಯನ್ನು ಮ್ಹ್ಯೋಚಿ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಮ್ಹ್ಯೋಚಿ, ಕಳೆದ ರಾತ್ರಿ ಲೈವ್ ಸ್ಟ್ರೀಮ್ ಮಾಡುತ್ತಿದೆ. ಅಲ್ಲೊಬ್ಬ ಯುವಕ ನನಗೆ ಕಿರುಕುಳ ನೀಡಿದೆ. ಪರಿಸ್ಥಿತಿಯನ್ನು ಪ್ರಕೋಪಕ್ಕೆ ತೆಗೆದುಕೊಂಡು ಹೋಗದಂತೆ ಹೇಗೋ ನಿಭಾಯಿಸಿದೆತುಂಬಾ ಸ್ನೇಹಪರ ಮತ್ತು ಆಪ್ತವಾಗಿ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇದು ಪ್ರಾರಂಭವಾಯಿತು ಎಂದು ಕೆಲವು ಜನರು ಹೇಳಿದರು. ಇದೀಗ ಸ್ಟ್ರೀಮಿಂಗ್ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಈ ಘಟನೆ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.
ಯುವಕರಿಬ್ಬರನ್ನು ಬಂಧಿಸಿರುವ ಮುಂಬೈ ಪೊಲೀಸರು ವಿಡಿಯೋ ಆಧಾರದ ಮೇಲೆ ಇಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. (ಏಜೆನ್ಸೀಸ್)