

ದಕ್ಷಿಣ ಕೊರಿಯಾ: ಹಾರಾಟದ ಸಮಯದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ನಿರ್ಗಮನದ ದ್ವಾರವನ್ನು ತೆಗೆದು ಇತರರ ಪ್ರಾಣಕ್ಕೆ ಸಂಚಕಾರ ತಂದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.
ಏಷಿಯಾನಾ ಏರ್ಲೈನ್ಸ್ ಏರ್ಬಸ್ A321ನಲ್ಲಿ ಘಟನೆ ನಡೆದಿದ್ದು ಬಾಗಿಲು ತೆಗೆಯಲು ಯತ್ನಿಸಿದ ವ್ಯಕ್ತಿಯನ್ನು ಸಹ ಪ್ರಯಾಣಿಕರು ತಡೆಯಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಆತ ಬಾಗಿಲನ್ನು ತೆರೆದಿದ್ದ ಎಂದು ಅಲ್ಲಿನ ಸಾರಿಗೆ ಸಚಿವಾಲಯ ತಿಳಿಸಿದೆ.
194 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವು ಜೆಜು ನಗರದಿಂದ ಡೇಗು ಕಡೆಗೆ ತೆರಳುತ್ತಿತ್ತು. ಈ ಎರಡು ನಗರಗಳ ನಡುವಿನ ಪ್ರಯಾಣ ಅವಧಿಯೂ ಒಂದು ಘಂಟೆಗಳಿದ್ದು ತುರ್ತು ನಿರ್ಗಮನದ ದ್ವಾರವನ್ನು ಎಷ್ಟು ಹೊತ್ತು ತೆರಯಲಾಗಿತ್ತು ಎಂದು ತಿಳಿದು ಬಂದಿಲ್ಲ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜೋರಾಗಿ ಬೀಸುವ ಗಾಳಿಯಿಂದ ಇತರೆ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದನ್ನು ನೋಡಬಹುದಾಗಿದೆ.
ಘಟನೆ ಸಂಬಂಧ ಹುಚ್ಚಾಟ ಮೆರೆದ ಆರೋಫಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಏಷಿಯಾನಾ ಮತ್ತು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.