ಪ್ರಾಣಿರಕ್ಷಣೆ ದೇವರ ಸೇವೆ: ಡಾ.ವಿ.ಕರಿಕಾಳನ್ ವಿಶ್ಲೇಷಣೆ

pilikula
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕೇಂದ್ರ ಮೃಗಾಲಯ ಪ್ರಾಧಿಕಾರ(ಸಿಜೆಡ್‌ಎ)ವತಿಯಿಂದ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಮೂರು ದಿನಗಳ ದಕ್ಷಿಣ ಭಾರತ ಮೃಗಾಲಯದ ಪ್ರಾಣಿ ಪರಿಪಾಲಕರ ಕಾರ್ಯಾಗಾರವನ್ನು ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಮಧ್ಯಮ ಗಾತ್ರದ ಪಿಲಿಕುಳ ಮೃಗಾಲಯ ಇಂದು ಬೃಹತ್ ಮೃಗಾಲಯವಾಗಿ ಪರಿವರ್ತನೆಗೊಂಡಿದ್ದು, ಇದಕ್ಕಾಗಿ ಶ್ರಮಿಸಿರುವ ನಿರ್ದೇಶಕರು ಮತ್ತು ಸಿಬ್ಬಂದಿ ಅಭಿನಂದನಾರ್ಹರು. ಮೂಕಪ್ರಾಣಿಗಳ ಸಂರಕ್ಷಣೆ ಪ್ರಾಣಿ ಪರಿಪಾಲಕರ ಕರ್ತವ್ಯ. ಇದು ದೇವರಿಗೆ ಮಾಡುವ ಸೇವೆಗೆ ಸಮಾನ ಎಂದರು.

ಮಂಗಳೂರು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಪ್ರಾಣಿಗಳ ಆರೋಗ್ಯ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಕೇಂದ್ರ ಮೃಗಾಲಯದ ಪ್ರತಿನಿಧಿಯಾಗಿ ಆಗಮಿಸಿದ್ದ ಹಿರಿಯ ಸಂಶೋಧನಾ ಅಧಿಕಾರಿ ಶಾಲು ಮಿಸೆರಿಯಾ ಮಾತನಾಡಿ, ‘ಮೃಗಾಲಯಗಳಲ್ಲಿ ಪರಿಣಾಮಕಾರಿ ಸಂರಕ್ಷಣೆ ಶಿಕ್ಷಣ ತಂತ್ರಗಳು’ ವಿಷಯ ಹಾಗೂ ಮಂಗಳೂರು ಪಶುಸಂಗೋಪನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಅವರು, ‘ಮೃಗಾಲಯದ ಸುರಕ್ಷಾ ಕ್ರಮಗಳು ಮತ್ತು ಸಾಂಕಾಮಿಕ ರೋಗಗಳ ತಡೆಗಟ್ಟುವಿಕೆ’ ಕುರಿತು ಉಪನ್ಯಾಸ ನೀಡಿದರು. ವನ್ಯಜೀವಿ ಸಂರಕ್ಷಕ ಎಚ್.ಸಿ.ಭುವನೇಶ್, ‘ವನ್ಯಜೀವಿ-ಮಾನವ ಸಂಘರ್ಷದಲ್ಲಿ ಮೃಗಾಲಯಗಳ ಪಾತ್ರ’ ಹಾಗೂ ಹರ್ಪೆಟೋಫೌನಾ ತಜ್ಞ ಡಾ.ಸೂರ್ಯ ಎನ್.ಆರ್., ‘ವನ್ಯಜೀವಿ ಸಂರಕ್ಷಣೆ’ ಕುರಿತು ಮಾತನಾಡಿದರು.

ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ಪಿಲಿಕುಳ ಮೃಗಾಲಯದ ಪಶು ವೈದ್ಯಾಧಿಕಾರಿ ಡಾ.ದಿವ್ಯಾ ಜೆ. ವಂದಿಸಿದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳದ 22 ಮೃಗಾಲಯಗಳ 40 ಪ್ರಾಣಿ ಪರಿಪಾಲಕರು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net