Match Fixing ಆರೋಪ; ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಮೂವರು ಆಟಗಾರರು Arrest

South Africa Cricket Team
Published on

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಮ್ಯಾಚ್​ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 233 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಸಂಭ್ರಮದ ನಡುವೆಯೇ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ಬೆಳವಣಿಗೆಯೊಂದು ನಡೆದಿದ್ದು, ತಂಡದ ಮೂವರು ಮಾಜಿ ಆಟಗಾರರನ್ನು ಮ್ಯಾಚ್​ ಫಿಕ್ಸಿಂಗ್ (Match Fixing) ಆರೋಪದ ಮೇಲೆ ಬಂಧಿಸಲಾಗಿದೆ.

ಬಂಧಿತರನ್ನು ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಎಂದು ಗುರುತಿಸಲಾಗಿದ್ದು, 2016ರಲ್ಲಿ ನಡೆದಿದ್ದ ಮ್ಯಾಚ್​ ಫಿಕ್ಸಿಂಗ್​ (Match Fixing) ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ವಿಭಾಗವು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

2016ರಲ್ಲಿ ನಡೆದಿದ್ದ ರಾಮ್ ಸ್ಲಾಮ್’ ಟಿ20 ಟೂರ್ನಿಯಲ್ಲಿ ನಡೆದಿದ್ದ ಮ್ಯಾಚ್​ ಫಿಕ್ಸಿಂಗ್​ಗೆ ಸಂಬಂಧಿಸಿದಂತೆ ಈ ಮೂವರು ಆಟಗಾರರ ವಿರುದ್ಧ ಆರೋಪ ಕೇಳಿ ಬಂದಿತ್ತು. ಆ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಮೂವರು ಆಟಗಾರರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ನಿರ್ದೇಶನಾಲಯ (DPCI) ಮೂವರು ಮಾಜಿ ಆಟಗಾರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದೆ.

2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆಗಟ್ಟುವಿಕೆ ಮತ್ತು ಹೋರಾಟ ಕಾಯ್ದೆ ಸೆಕ್ಷನ್​ 15ರ ಅಡಿಯಲ್ಲಿ ಈ ಮೂವರು ಮಾಜಿ ಆಟಗಾರರನ್ನು ಬಂಧಿಸಲಾಗಿದ್ದು, ಇವರ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಫೆಬ್ರವರಿ 2025 ರವರೆಗೆ ಮುಂದೂಡಲಾಗಿದೆ. ಸದ್ಯ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net