ಭಾರತ ವಿರುದ್ಧ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡೀನ್​ ಎಲ್ಗರ್​ ವಿದಾಯ

elgar web
Published on

ಜೊಹಾನ್ಸ್​ರ್ಬಗ್​: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ಅನುಭವಿ ಎಡಗೈ ಬ್ಯಾಟರ್​ ಡೀನ್​ ಎಲ್ಗರ್​ ಮಂಗಳವಾರದಿಂದ ನಡೆಯಲಿರುವ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯ ನಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.

2012ರಲ್ಲಿ ಪದಾರ್ಪಣೆ ಮಾಡಿದ್ದ ಎಲ್ಗರ್​ ಇದುವರೆಗೆ 84 ಟೆಸ್ಟ್​ ಆಡಿದ್ದು, 13 ಶತಕ ಮತ್ತು 23 ಅರ್ಧಶತಕಗಳ ಸಹಿತ 37.28ರ ಸರಾಸರಿಯಲ್ಲಿ 5,146 ರನ್​ ಬಾರಿಸಿದ್ದಾರೆ. 36 ವರ್ಷದ ಎಲ್ಗರ್​ ದಕ್ಷಿಣ ಆಫ್ರಿಕಾ ಪರ 8 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. 2018ರಲ್ಲಿ ಕೊನೆಯದಾಗಿ ಅವರು ಏಕದಿನ ಪಂದ್ಯ ಆಡಿದ್ದರು.

"12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವ ಗೌರವವನ್ನು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. ಇದೊಂದು ಅಮೋ ಪ್ರಯಾಣ. ಇದು ನನ್ನ ಭಾಗ್ಯ. ಆದರೆ ಎಲ್ಲ ಒಳ್ಳೆಯ ವಿಷಯವೂ ಕೊನೆ ಕಾಣಲೇಬೇಕು. ಭಾರತ ವಿರುದ್ಧದ ತವರಿನ ಸರಣಿ ನನ್ನ ಪಾಲಿಗೆ ಕೊನೆಯದಾಗಿರುತ್ತದೆ. ನಮ್ಮ ಈ ಸುಂದರ ಆಟದಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ನಾನು ಈಗಾಗಲೆ ಕೈಗೊಂಡಿದ್ದೇನೆ' ಎಂದು ಎಲ್ಗರ್​ ಹೇಳಿದ್ದಾರೆ. ಜನವರಿ 3ರಿಂದ 7ರವರೆಗೆ ಕೇಪ್​ಟೌನ್​ನಲ್ಲಿ ನಡೆಯಲಿರುವ ಟೆಸ್ಟ್​ ಎಲ್ಗರ್​ ಪಾಲಿಗೆ ಕೊನೆಯದಾಗಿರುತ್ತದೆ.

"ಕೇಪ್​ಟೌನ್​ ವಿಶ್ವದಲ್ಲೇ ನನ್ನ ನೆಚ್ಚಿನ ಸ್ಟೇಡಿಯಂ. ನ್ಯೂಜಿಲೆಂಡ್​ ಎದುರು ಅಲ್ಲೇ ನನ್ನ ಮೊದಲ ಟೆಸ್ಟ್​ ಶತಕ ಸಿಡಿಸಿದ್ದೆ. ಅಲ್ಲೇ ನನ್ನ ಕೊನೆಯ ಟೆಸ್ಟ್​ ಆಡುತ್ತಿರುವುದು ಖುಷಿಯ ವಿಚಾರ' ಎಂದು ಎಲ್ಗರ್​ ಹೇಳಿದ್ದಾರೆ. ನಾಯಕರಾಗಿ 17 ಟೆಸ್ಟ್​ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ಅವರು 9 ಜಯ, 7 ಸೋಲು ಮತ್ತು 1 ಡ್ರಾ ಕಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net