

ನ್ಯೂಯಾರ್ಕ್: ಬೌಲರ್ಗಳು ನೀಡಿದ ಅಮೋಘ ತಿರುಗೇಟಿನ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಆಘಾತದಿಂದ ಪಾರಾಗಿ 4 ರನ್ಗಳಿಂದ ರೋಚಕ ಗೆಲುವು ದಾಖಲಿಸಿದೆ. ಡಿ ಗುಂಪಿನಲ್ಲಿ ಕಂಡ ಸತತ 3ನೇ ಜಯದೊಂದಿಗೆ ಹರಿಣಗಳ ಪಡೆ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೂಪರ್-8 ಪ್ರವೇಶವನ್ನು ಖಾತ್ರಿಪಡಿಸಿಕೊಂಡಿದೆ.
ಬೌಲರ್ಗಳ ಪಾಲಿಗೆ ಸ್ವರ್ಗದಂತಿರುವ ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ದ. ಆಫ್ರಿಕಾ, ಹೆನ್ರಿಕ್ ಕ್ಲಾಸೆನ್ (46 ರನ್, 44 ಎಸೆತ, 2 ಬೌಂಡರಿ, 3 ಸಿಕ್ಸರ್) ಹೋರಾಟದ ನಡುವೆ ವೇಗಿಗಳಾದ ತಂಜಿಮ್ ಹಸನ್ ಸಕೀಬ್ (18ಕ್ಕೆ 3) ಮತ್ತು ಟಸ್ಕಿನ್ ಅಹ್ಮದ್ (19ಕ್ಕೆ 2) ಬಿಗಿ ದಾಳಿಗೆ ಕುಸಿದು 6 ವಿಕೆಟ್ಗೆ 113 ರನ್ಗಳಿಗೆ ತೃಪ್ತಿಪಟ್ಟಿತು. ಪ್ರತಿಯಾಗಿ ಬಾಂಗ್ಲಾ ಕೂಡ ಚೇಸಿಂಗ್ನಲ್ಲಿ ತಿಣುಕಾಡಿತು. ಕೇಶವ್ ಮಹಾರಾಜ್ (27ಕ್ಕೆ 3), ಕಗಿಸೊ ರಬಾಡ (19ಕ್ಕೆ 2), ಅನ್ರಿಚ್ ನೋಕಿಯಾ (17ಕ್ಕೆ 2) ದಾಳಿಗೆ ನಲುಗಿದ ಬಾಂಗ್ಲಾ ಅಂತಿಮವಾಗಿ 7 ವಿಕೆಟ್ಗೆ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ರಕ್ಷಿಸಿಕೊಂಡ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಆಫ್ರಿಕಾ ಬೌಲರ್ಗಳ ತಿರುಗೇಟಿನಿಂದ ಬಾಂಗ್ಲಾ 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ತೌಹಿದ್ ಹೃದಯ್ (37) ಮತ್ತು ಮಹಮುದುಲ್ಲಾ (20) ಜೋಡಿ 5ನೇ ವಿಕೆಟ್ಗೆ 45 ಎಸೆತಗಳಲ್ಲಿ 44 ರನ್ ಸೇರಿಸಿ ಜಯ ಆಸೆಗೆ ಬಲ ತುಂಬಿತು.
ರೋಚಕ ಕೊನೇ ಓವರ್: ಕೊನೇ ಓವರ್ನಲ್ಲಿ ಬಾಂಗ್ಲಾಗೆ 11 ರನ್ಬೇಕಿದ್ದಾಗ ಸ್ಪಿನ್ನರ್ ಕೇಶವ್ ಮಹಾರಾಜ್ 6 ರನ್ (ವೈಡ್, 1, 2, ವಿಕೆಟ್, 1ಲೆಗ್ಬೈ, ವಿಕೆಟ್, 1) ಮಾತ್ರ ಬಿಟ್ಟುಕೊಟ್ಟರು.
ತಂಜಿಮ್ ಕಡಿವಾಣ: ಮೊದಲ ಓವರ್ನಲ್ಲೇ ರಿಜಾ ಹೆಂಡ್ರಿಕ್ಸ್ (0) ವಿಕೆಟ್ ಪಡೆದ ತಂಜಿಮ್ ಮೊದಲ ಆಘಾತ ನೀಡಿದರೆ, ಬಳಿಕ ಕ್ವಿಂಟನ್ ಡಿಕಾಕ್ (18) ಹಾಗೂ ಟ್ರಿಸ್ಟಾನ್ ಸ್ಟಬ್ಸ್ (0) ವಿಕೆಟ್ ಕಬಳಿಸಿ ಹರಿಣಗಳಿಗೆ ದೊಡ್ಡ ಹೊಡೆತ ನೀಡಿದರು. ನಾಯಕ ಏಡನ್ ಮಾರ್ಕ್ರಮ್ (4) ನಿರಾಸೆ ಮೂಡಿಸಿದರು. ಆಫ್ರಿಕಾ ಸತತ 2ನೇ ಪಂದ್ಯದಲ್ಲಿ 25 ರನ್ ಒಳಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆಗ ಜತೆಯಾದ ಹೆನ್ರಿಕ್ ಕ್ಲಾಸೆನ್ (46 ರನ್, 44 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಅನುಭವಿ ಡೇವಿಡ್ ಮಿಲ್ಲರ್ (29) 5ನೇ ವಿಕೆಟ್ಗೆ 79 ಎಸೆತಗಳಲ್ಲಿ 79 ರನ್ಗಳಿಸಿ ಚೇತರಿಕೆ ನೀಡಿದರು.
ದಕ್ಷಿಣ ಆಫ್ರಿಕಾ: 6 ವಿಕೆಟ್ಗೆ 113 (ಡಿಕಾಕ್ 13, ಮಾರ್ಕ್ರಮ್ 5, ಸ್ಟಬ್ಸ್ 0, ಕ್ಲಾಸೆನ್ 46, ಮಿಲ್ಲರ್ 29, ತಂಜಿಮ್ 18ಕ್ಕೆ 3, ಟಸ್ಕಿನ್ 19ಕ್ಕೆ 2). ಬಾಂಗ್ಲಾದೇಶ: 7 ವಿಕೆಟ್ಗೆ 109 (ಶಕೀಬ್ 3, ಹೃದಯ್ 37, ಮಹಮುದುಲ್ಲಾ 20, ಕೇಶವ್ 27ಕ್ಕೆ 3, ರಬಾಡ 19ಕ್ಕೆ 2, ನೋಕಿಯಾ 17ಕ್ಕೆ 2).