

ಮುಂಬೈ: ಎಪ್ಪತ್ತೈದು ವರ್ಷ ವಯಸ್ಸಿನ ಒಬ್ಬ ಅಜ್ಜಿ ಪುಣೆಯ ಬೀದಿಯಲ್ಲಿ ‘ಸ್ವಯಂರಕ್ಷಣೆಯ ಕಲೆ’ ಪ್ರದರ್ಶಿಸಿ ಭಿಕ್ಷೆ ಬೇಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೆಲ್ಲವನ್ನೂ ತಾನು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಾಡುತ್ತಿದ್ದೇನೆ ಎಂದು ಅಜ್ಜಿ ಕೊನೆಯಲ್ಲಿ ಹೇಳುತ್ತಾರೆ.
ಹಾತಿಂದರ್‌ಸಿಂಗ್ ಎಂಬುವವರು ಈ ಅಜ್ಜಿಯ ವಿಡಿಯೋ ಮಾಡಿ ಅದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘‘75 ವರ್ಷದ ಈ ಮಾತಾಜಿ ಹೊಟ್ಟೆ ಹೊರೆಯುವುದಕ್ಕಾಗಿ ಪುಣೆಯಲ್ಲಿ ತಮ್ಮ ಲಾಠಿ ಸ್ಕಿಲ್ ಪ್ರದರ್ಶಿಸುತ್ತಿದ್ದಾರೆ. ಕರೊನಾ ವೈರಸ್ ಹಾವಳಿ ಮತ್ತು ಲಾಕ್‌ಡೌನ್‌ನಂತಹ ಕಾಲದಲ್ಲೂ ಈ ಅಜ್ಜಿ ಇದನ್ನೆಲ್ಲ ಮಾಡುತ್ತಿದ್ದಾರೆಂದರೆ ಅವರಿಗೆ ಬದುಕಲು ಬೇರೆ ಯಾವುದೇ ಆದಾಯದ ಮೂಲ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರ ಕುರಿತು ಯಾರ ಬಳಿಯಾದರೂ ವಿವರವಾದ ಮಾಹಿತಿ ಇದ್ದರೆ ತಿಳಿಸಿ’’ ಎಂದು ಕೋರಿದ್ದರು.
ಇದಕ್ಕೆ ಅನೇಕ ಮಂದಿ, ಅನೇಕ ರೀತಿಯಲ್ಲಿ ಕಮೆಂಟ್ ಮಾಡಿ ನೋವು, ವಿಷಾದ, ಸಂತೋಷ ಎಲ್ಲವನ್ನೂ ಹಂಚಿಕೊಂಡರು.
ಆದರೆ ಇತ್ತೀಚೆಗೆ ಪರೋಪಕಾರವನ್ನೇ ತಮ್ಮ ಧ್ಯೇಯವಾಗಿಸಿಕೊಂಡು ಸಂತ್ರಸ್ತರಿಗೆ ನೆರವಾಗುತ್ತಿರುವ ಬಾಲಿವುಡ್ ನಟ ಸೋನು ಸೂದ್ ಮಾತ್ರ ಅಜ್ಜಿಯ ವಿಳಾಸ ಹುಡುಕಿ ಹೊರಟಿಸಿದ್ದಾರೆ. ಲಾಕ್‌ಡೌನ್ ಶುರುವಾದಂದಿನಿಂದ ಸಂತ್ರಸ್ತರಿಗಾಗಿ ಸೋನು ಸೂದ್ ಅವರು ಮಾಡಿರುವ ಉಪಕಾರಗಳ ದೊಡ್ಡ ಪಟ್ಟಿಯೇ ಇದೆ. ಇದರಿಂದಾಗಿ ಇವರು ನಿಜ ಜೀವನದಲ್ಲಿಯೂ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಅಜ್ಜಿಯ ವಿಳಾಸ ಹುಡುಕಿ ಹೊರಟಿರುವ ಕಾರಣ, ಇನ್ನೂ ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಿದ್ದಾರೆ.
‘ಪ್ಲೀಸ್ ಈ ಅಜ್ಜಿಯ ವಿಳಾಸ ಯಾರಾದರೂ ಹೇಳುವಿರಾ? ನನಗೆ ಅವರ ಮಾಹಿತಿ ಬೇಕಾಗಿದೆ. ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು ಕಲಿಸಿಕೊಡಲು ಇವರ ಅವಶ್ಯಕತೆ ಇದೆ. ಈ ಕುರಿತು ಸಣ್ಣ ತರಬೇತಿ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಇವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಕೇಳಿ’ ಎಂದು ಟ್ವೀಟ್ ಮಾಡಿರುವ ಸೋನು, ಅಜ್ಜಿಯ ಸಾಹಸದ ವಿಡಿಯೋವನ್ನೂ ಅದರಲ್ಲಿ ಹಾಕಿದ್ದಾರೆ.
ಈ ಅಜ್ಜಿಯ ಹೆಸರು ಶಾಂತಾ ಬಾಲು ಪವಾರ್. ಪುಣೆಯ ಹಡ್ಪಸರ್‌ನವರು. ಇಂತಹ ಸಂದರ್ಭದಲ್ಲಿಯೂ ಅವರೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ಕಮೆಂಟಿಗರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.