

ಚಂಡೀಗಢ: ಪಂಜಾಬ್ನ(Punjab) ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಅವರ ಪತ್ನಿ ಮಾಜಿ ಸಚಿವೆ ರಜಿಯಾ ಸುಲ್ತಾನ್ ವಿರುದ್ದ ಅವರ ಮಗ ಅಖಿಲ್ ಅಕ್ತರ್ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಂಗಳವಾರ(ಅ. 21) ವರದಿಯಾಗಿದೆ.
ಪಂಜಾಬ್-ಹರಿಯಾಣ ಹೈಕೋರ್ಟ್ನ ವಕೀಲರಾಗಿದ್ದ, ಪಂಚಕುಲದ ಎಂಡಿಸಿಯ ಸೆಕ್ಟರ್-4ರ ನಿವಾಸಿ ಅಖಿಲ್ ಅಕ್ತರ್ ಅ. 16ರಂದು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅತಿಯಾದ ಮಾದಕ ಸೇವನೆಯಿಂದ ಮೃತಪಟ್ಟಿದ್ದಾನೆ ಎಂದು ಮೊದಲು ಕುಟುಂಬದ ಮೂಲಗಳು ತಿಳಿಸಿದ್ದವು.
ಆದರೆ ಮಲೇರ್ ಕೋಟ್ಲಾದ ಶಂಶುದ್ದೀನ್ ಚೌಧರಿ ಎನ್ನುವರು ಅಕ್ತರ್ ಸಾವು ಅನುಮಾನಸ್ಪದ ಎಂದು ಆತನ ತಂದೆ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಅವರ ಪತ್ನಿ ಮಾಜಿ ಸಚಿವೆ ರಜಿಯಾ ಸುಲ್ತಾನ್, ಮಗಳು, ಹಾಗೂ ಸೊಸೆ ವಿರುದ್ಧ ಅಕ್ತರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ಗಳನ್ನು ಆಧರಿಸಿ ಅ. 17ರಂದು ದೂರು ನೀಡಿದ್ದಾರೆ. ಆ ದೂರಿನ ಆಧಾರದ ಮೇಲೆ ಪಂಚಕುಲದ ಎಂಡಿಸಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 103 (1) (ಕೊಲೆಗೆ ಶಿಕ್ಷೆ) ಮತ್ತು 61 (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಗಸ್ಟ್‌ನಲ್ಲಿ ಅಕ್ತರ್ ರೆಕಾರ್ಡ್ ಮಾಡಿದ್ದಾನೆ ಎನ್ನಲಾದ ವಿಡಿಯೋವೊಂದರಲ್ಲಿ, ಅಖಿಲ್ ತನ್ನ ತಂದೆ ಮತ್ತು ಪತ್ನಿ ನಡುವೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ನನ್ನ ಹೆಂಡತಿಗೆ ನನ್ನ ತಂದೆಯೊಂದಿಗೆ ಸಂಬಂಧವಿದೆ ಎಂದು ನನಗೆ ತಿಳಿದಿದೆ. ನಾನು ತುಂಬಾ ಒತ್ತಡ ಮತ್ತು ಮಾನಸಿಕ ಆಘಾತದಲ್ಲಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಅವರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ನನಗೆ ಪ್ರತಿದಿನ ಅನಿಸುತ್ತದೆ. ನನ್ನ ತಾಯಿ ರಜಿಯಾ ಮತ್ತು ಸಹೋದರಿ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾನೆ.
ಇನ್ನೂ ಪ್ರಕರಣದ ಕುರಿತು ಮಾತನಾಡಿರುವ ಉಪ ಪೊಲೀಸ್ ಆಯುಕ್ತ ಸೃಷ್ಟಿ ಗುಪ್ತಾ, "ಯಾವುದೇ ತಪ್ಪಿತಸ್ಥ ವ್ಯಕ್ತಿಯನ್ನು ಬಿಡಬಾರದು, ಯಾವುದೇ ನಿರಪರಾಧಿ ವ್ಯಕ್ತಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ಯಾವುದೇ ಪೂರ್ವಾಗ್ರಹವಿಲ್ಲದೆ ಸಂಪೂರ್ಣ, ನಿಷ್ಪಕ್ಷಪಾತ ಮತ್ತು ಸಾಕ್ಷ್ಯಾಧಾರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸಹಾಯಕ ಪೊಲೀಸ್ ಆಯುಕ್ತರ ಅಡಿಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)