

ಪಾಟ್ನಾ: ಬಿಹಾರ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಇಂಡಿಯಾ ಮೈತ್ರಿಕೂಟದ ಸ್ಥಾನ ಹಂಚಿಕೆ ಗೊಂದಲದ ನಡುವೆ ವಿಚಿತ್ರ ಬೆಳವಣಿಗೆಯೊಂದು ನಡೆಯುತ್ತಿದೆ. ಆರ್ಜೆಡಿ ಅಭ್ಯರ್ಥಿ ವಿರುದ್ಧವೇ ಆರ್ಜೆಡಿಯ ಮುಖ್ಯ ನಾಯಕ ತೇಜಸ್ವಿ ಯಾದವ್(Tejashwi Yadav) ಪ್ರಚಾರ ನಡೆಸಲಿದ್ದಾರೆ.
ಚುನಾವಣೆ ಮುನ್ನವೇ ಇಂಡಿಯಾ ಮೈತ್ರಿಕೂಟ ಪಕ್ಷದಗಳಲ್ಲಿ ಸೀಟು ಹಂಚಿಕೆ ಸಮಯದಲ್ಲಿ ಒಮ್ಮತ ಕಂಡುಕೊಳ್ಳಲು ಹೆಣಗಾಡಿವೆ. ಜೊತೆಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಕೊನೆಯವರಿಗೆ ಪರಿಹರಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಹಲವು ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳ ನಡುವೆ ಸ್ನೇಹಪರ ಹೋರಾಟ ನಡೆಯಲಿದೆ ಎನ್ನಲಾಗಿದೆ.
ಆದರೆ ದರ್ಭಾಂಗಾ ಜಿಲ್ಲೆಯ ಗೌರ ಬೌರಂ ಮತಕ್ಷೇತ್ರದ ಸೀಟು ಹಂಚಿಕೆಯ ಅಡ್ಡಪರಿಣಾಮ ವಿಪರೀತ ಮಟ್ಟವನ್ನು ತಲುಪಿ, ವಿಚಿತ್ರ ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಈ ಕ್ಷೇತ್ರದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಮುನ್ನವೇ ಆರ್ಜೆಡಿ ತನ್ನ ಅಭ್ಯರ್ಥಿಯನ್ನಾಗಿ ಅಫ್ಜಲ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು. ಜೊತೆಗೆ ಪಕ್ಷದ ಬಿ ಫಾರಂ ಅನ್ನು ಸಹ ನೀಡಿತು.
ಖುಷಿಯಿಂದ ಅಫ್ಜಲ್ ಖಾನ್ ಬಿ ಫಾರಂ ಪಡೆದು ಪಾಟ್ನಾದಿಂದ ನಾಲ್ಕು ತಾಸು ಜರ್ನಿ ಮಾಡಿ ದರ್ಭಾಂಗಾ ಮುಟ್ಟೋದರೊಳಗೆ ಆರ್ಜೆಡಿ ಮತ್ತು ಮುಖೇಶ್ ಸಾಹ್ನಿಲ್ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷದ ನಡುವೆ ಸೀಟು ಹಂಚಿಕೆ ಮಾತುಕತೆ ನಡೆದಿದೆ. ಈ ಒಪ್ಪಂದದ ಪ್ರಕಾರ ಅಫ್ಜಲ್ ಖಾನ್ಗೆ ಟಿಕೆಟ್ ನೀಡಿದ್ದ ಗೌರ ಬೌರಂ ಕ್ಷೇತ್ರವನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಜೊತೆಗೆ ಮಿತ್ರ ಪಕ್ಷದ ಅಭ್ಯರ್ಥಿ ಸಂತೋಷ್ ಸಾಹ್ನಿಯನ್ನು ಬೆಂಬಲಿಸಲು ನಿರ್ಧರಿಸಿದೆ.
ಈ ಹಿನ್ನೆಲೆ ಆರ್ಜೆಡಿ ಮುಖ್ಯ ನಾಯಕರು ಅಫ್ಫಲ್ ಖಾನ್ರನ್ನು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರಾಕರಿಸಿದ ಅಫ್ಜಲ್ ಖಾನ್ ಆರ್ಜೆಡಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಅದನ್ನು ತಿರಸ್ಕರಿಸುವಂತೆ ಆರ್ಜೆಡಿ, ಚುನಾವಣೆ ಅಧಿಕಾರಿಗಳಿಗೆ ಪಕ್ಷವು ಅವರ ಉಮೇದುವಾರಿಕೆಯನ್ನು ಅನುಮೋದಿಸುವುದಿಲ್ಲ ಎಂದು ಕೇಳಿಕೊಂಡಿತು. ಆದರೆ ಅಫ್ಜಲ್ ಅಲಿ ಖಾನ್ ಅವರು ಸರಿಯಾದ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಿರುವುದರಿಂದ ನಾಮಪತ್ರ ತಿರಸ್ಕರಿಸಲಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನೆಲೆ ಅಫ್ಜಲ್ ಖಾನ್ ಆರ್ಜೆಡಿ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ. ಆದರೆ ಅವರ ವಿರುದ್ಧ ಆರ್ಜೆಡಿ ಮುಖ್ಯ ನಾಯಕ ತೇಜಸ್ವಿ ಯಾದವ್ ವಿಐಪಿ ಪಕ್ಷದ ಸಂತೋಷ್ ಸಾಹ್ನಿಲ್ ಪರ ಪ್ರಚಾರ ನಡೆಸಲಿದ್ದಾರೆ. (ಏಜೆನ್ಸೀಸ್)