

ಮುಂಬೈ: ತನ್ನ ಕಂಪೆನಿಯ ಉತ್ಪನ್ನವನ್ನು ವಿಭಿನ್ನ ಜಾಹೀತಾತು ಮೂಲಕ ಪ್ರಚಾರ ಮಾಡಲು ಹೋದ ಮುಂಬೈ ಮೂಲದ ಸ್ಟೋರಿಯಾ ಪುಡ್ಸ್ ಆ್ಯಂಡ್ ಬ್ರಿವರೇಜ್ (ಪಾನೀಯ) ಸಂಸ್ಥೆ ಎಡವಟ್ಟು ಮಾಡಿಕೊಂಡಿದೆ. ಈ ಕಂಪನಿಯ ವಿವಾದಾತ್ಮಕ ಜಾಹೀರಾತೊಂದರಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಣುಕಿಸಲಾಗಿದೆ.
ಈ ಕುರಿತು ಮುಂಬೈನ ಅಂದೇರಿಯಲ್ಲಿರುವ ಸ್ಟೋರಿಯಾ ಕಚೇರಿಗೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಜಾಹೀರಾತಿನಲ್ಲಿ ಏನಿದೆ?: ವಿವಾದಾತ್ಮಕ 45 ಸೆಕೆಂಡ್ನ ವಿಡಿಯೋ ಜಾಹೀರಾತಿನಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಅಣುಕಿಸಲಾಗಿದೆ. ಮಿಲ್ಕ್ ಶೇಕ್ವೊಂದರ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿದೆ. ನನಗೆ ಹಸಿವಾಗಿದೆ ಏನೂ ಇಲ್ಲವಾ ಎಂದು ಸೋನಿಯಾ ಗಾಂಧಿ ಹೋಲುವ ನಟಿ ಪ್ರಶ್ನಿಸುತ್ತಾಳೆ. ಆಗ ರಾಹುಲ್ ಗಾಂಧಿ ಅವರು ಎಲ್ಲಾ ಖತಂ ಖತಂ ಎಂದು ಹೇಳಿ, ಹಸುವಿನಿಂದ ಹಾಲು ಕರೆದು ತರುತ್ತೇನೆ ಎನ್ನುತ್ತಾರೆ. ಇದನ್ನು ರಾಹುಲ್ ಗಾಂಧಿ ಆಂಗೀಕ ಅಭಿನಯದಲ್ಲಿ ನಟ ಹೇಳುತ್ತಾನೆ.
ಕಳೆದ ನಾಲ್ಕು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಟೋರಿಯಾ ಕಂಪೆನಿ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ.