

ಮಾಸ್ಕೋ: ಜಿರಳೆಗಳೇ ತುಂಬಿದ್ದ ಮನೆಯಲ್ಲಿ ಹತ್ತು ವರ್ಷದ ಮಗನನ್ನು ಸುಮಾರು 8 ದಿನಗಳವರೆಗೆ ಕೂಡಿಹಾಕಿ, ತಿನ್ನಲು ಅಕ್ಕಿ ಮಾತ್ರ ನೀಡಿ ತನ್ನ ಫ್ರೆಂಡ್ಸ್ ನೋಡಲು ಹೋಗಿದ್ದ ಮಹಿಳೆಗೆ ವಾಪಸ್ಸು ಬರುವಷ್ಟರಲ್ಲಿ ಆಘಾತವೊಂದು ಕಾದಿತ್ತು.
ಒಂಟಿಯಾಗಿ ನಾಲ್ಕು ದಿನ ಕತ್ತಲೆ ಕೂಪದಲ್ಲಿ ಕಳೆದಿದ್ದ ಬಾಲಕ ಹಸಿವಿನಿಂದ ಬಳಲಿ ಸಹಾಯಕ್ಕಾಗಿ ಕೂಗಾಡಿದ್ದ. ಅದೃಷ್ಟವಶಾತ್ 4 ದಿನಗಳ ಬಳಿಕ ನೆರೆ ಮನೆಯವರು ಆತನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮಗ ಮಿಖೈಲ್, ಹಸಿವಿನಿಂದ ಸಾಯಲು ಕಾರಣವಾಗುತ್ತಿದ್ದ ಮಹಿಳೆ ನಟಲ್ಯಾ ಅಜರೆನ್ಕೋವಾ (31)ಳನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.
ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಬಾಲಕ ರಕ್ಷಣೆ ಮಾಡಲಾಗಿದ್ದು, ಆ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಮನೆಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ರಕ್ಷಣೆಗೆ ಬಂದವರ ಬಳಿ ಬಾಲಕ ತುರ್ತಸೇವೆ ಕರೆ ಮಾಡಬೇಡಿ ಎಂದು ಬೇಡಿಕೊಂಡಿದ್ದ. ಏಕೆಂದರೆ, ಅವರು ಅನಾಥಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಮತ್ತೆ ತನ್ನ ತಾಯಿಯನ್ನು ನೋಡಲು ಆಗುವುದಿಲ್ಲ ಎಂಬ ಭಯದಿಂದ ತುರ್ತುಸೇವೆ ಬೇಡವೆಂದು ನಿರಾಕರಿಸಿದ್ದ.
ಬಾಲಕ ಸುಮಾರು 4 ದಿನ ಏಕಾಂಗಿಯಾಗಿ, ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ, ಜಿರಳೆಗಳೇ ಮುತ್ತಿಕೊಂಡಿದ್ದ ಮನೆಯಲ್ಲಿ ನರಕ ದರ್ಶನ ಮಾಡಿದ್ದ. ಆ ಕುರಿತು ಮಾತನಾಡಿರುವ ಮಿಖೈಲ್, ಕೇವಲ ಅಕ್ಕಿ ಮಾತ್ರ ನೀಡಿ ನನ್ನೊಬ್ಬನನ್ನೇ ಬಿಟ್ಟು ನಾಯಿಯನ್ನು ವಾಕಿಂಗ್ ಕರೆದೊಯ್ಯುವುದಾಗಿ ತಾಯಿ ಹೊರ ಹೋದಳು. ಅಡುಗೆ ಮಾಡಿಕೊಳ್ಳಲು ನೀರು ಸಹ ನೀಡಲಿಲ್ಲ ಎಂದಿದ್ದಾನೆ.
ರಕ್ಷಣೆ ಮಾಡುವ ಮುನ್ನ ಮನೆ ಲಾಕ್ ಆಗಿದ್ದರಿಂದ ನೆರ ಮನೆಯವರೇ ಬಾಲಕನಿಗೆ ಆಹಾರ ಮತ್ತು ಜ್ಯೂಸ್ ನೀಡುತ್ತಿದ್ದರು. ಆದರೆ, ಬಾಲಕನ ತಾಯಿ ಬರದೇ ಇರುವುದನ್ನು ಗಮನಿಸಿದ ನೆರೆಯವರು ತಕ್ಷಣ ತುರ್ತುಸೇವೆಗೆ ಕರೆ ಮಾಡಿ ಬಾಲಕನನ್ನು ರಕ್ಷಿಸಿದ್ದಾರೆ. ಜಿರಳೆಗಳೇ ಇರುವ ಅಪಾರ್ಟ್ಮೆಂಟ್ನಲ್ಲಿ ಬಾಲಕ ಹೇಗೆ 4 ದಿನಗಳವರೆಗೆ ಬದುಕಿದ್ದ ಎಂಬುದೇ ಅಚ್ಚರಿಯೆಂದು ನೆರೆಯವರು ತಿಳಿಸಿದ್ದಾರೆ.
ಇತ್ತ ಬಾಲಕನ ತಾಯಿ ಮಾತ್ರ 8 ದಿನಗಳ ಬಳಿಕ ಮನೆಗೆ ಮರಳಿದ್ದಳು. ಅಷ್ಟರಲ್ಲಾಗಲೇ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಎರಡು ವರ್ಷಗಳ ಹಿಂದಷ್ಟೇ ಬಾಲಕನ ತಂದೆ ಮೃತಪಟ್ಟಿದ್ದಾರೆ. ಸದ್ಯ ಆತನ ತಾಯಿಯನ್ನು ಬಂಧಿಸಲಾಗಿದ್ದು, ಕೇವಲ ಎರಡು ದಿನಗಳವರೆಗೆ ಮಾತ್ರ ಫ್ರೆಂಡ್ಸ್ ಭೇಟಿಗೆ ತೆರಳಿದ್ದೆ ಎಂದಿದ್ದಾಳೆ. ಆದರೆ, 8 ದಿನಗಳ ಬಳಿಕ ಬಂದಿದ್ದೇಕೆ ಎಂಬ ಪ್ರಶ್ನೆಗೆ ಆಕೆಯಿಂದ ಉತ್ತರ ಬಂದಿಲ್ಲ. ಇದರ ನಡುವೆ ನನ್ನ ಮಗ ಬೇಕು. ನಾನು ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇನೆಂದು ಪೊಲೀಸರಿಗೆ ಹೇಳಿದ್ದಾಳೆ. ಆದರೂ ಸದ್ಯ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್)